×
Ad

ನಿಗದಿತ ಗಡುವಿನಲ್ಲಿ ಜಲಾಂತರ್ಗಾಮಿ,ಹೆಲಿಕಾಪ್ಟರ್ ಖರೀದಿಗೆ ಟೆಂಡರ್ ಕರೆಯುವಲ್ಲಿ ನೌಕಾಪಡೆ ವಿಫಲ

Update: 2018-05-03 21:21 IST

ಹೊಸದಿಲ್ಲಿ,ಮೇ 3: ಕಳೆದ 10 ತಿಂಗಳುಗಳಲ್ಲಿ ಭಾರತೀಯ ನೌಕಾಪಡೆಯ ಮೂರು ಪ್ರಮುಖ ಖರೀದಿ ಕಾರ್ಯಕ್ರಮಗಳಿಗೆ ನೀಡಲಾಗಿದ್ದ ಅನುಮತಿಗಳು ವ್ಯರ್ಥವಾಗಿದ್ದು,ಜಲಾಂತರ್ಗಾಮಿಗಳು ಮತ್ತು ಹೆಲಿಕಾಪ್ಟರ್‌ಗಳ ಖರೀದಿಗಾಗಿ ಟೆಂಡರ್‌ಗಳನ್ನು ಕರೆಯುವ ಗಡುವನ್ನು ತಪ್ಪಿಸಿಕೊಂಡಿದೆ.

 7.5 ಶತಕೋಟಿ ಡಾ.ಮೌಲ್ಯದ ಜಲಾಂತರ್ಗಾಮಿಗಳು ಮತ್ತು ಐದು ಶತಕೋಟಿ ಡಾ.ಮೌಲ್ಯದ ಹೆಲಿಕಾಪ್ಟರ್‌ಗಳ ಖರೀದಿಗಾಗಿ ಪ್ರಕ್ರಿಯೆಯನ್ನು ನೌಕಾಪಡೆಯು ಈಗ ಹೊಸದಾಗಿ ಆರಂಭಿಸಬೇಕಿದೆ ಎಂದು ಬಲ್ಲ ಮೂಲಗಳು ತಿಳಿಸಿದವು. ಖರೀದಿಗಳಿಗಾಗಿ ರಕ್ಷಣಾ ಖರೀದಿ ಮಂಡಳಿಯು ನೀಡುವ ಅನುಮತಿ ಆರು ತಿಂಗಳು ಊರ್ಜಿತದಲ್ಲಿರುತ್ತದೆ ಮತ್ತು ಆ ಅವಧಿಯೊಳಗೆ ಟೆಂಡರ್‌ಗಳನ್ನು ಕರೆಯಬೇಕಾಗುತ್ತದೆ.

ನೆರೆಯ ಚೀನಾ ಮತ್ತು ಪಾಕಿಸ್ತಾನಗಳಿಂದ ಬೆದರಿಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ 250 ಶತಕೋಟಿ ಡಾ.ವೆಚ್ಚದಲ್ಲಿ ಸೇನೆಯನ್ನು ಆಧುನೀಕರಿಸುವ ಪ್ರಧಾನಿ ಮೋದಿಯವರ ಯೋಜನೆಗೆ ಈ ಬೆಳವಣಿಗೆಯು ಹಿನ್ನಡೆಯನ್ನುಂಟು ಮಾಡಿದೆ. ಇದು ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ಯೋಜನೆಯ ಅಂಗವಾಗಿ ಭಾರತದಲ್ಲಿ ರಕ್ಷಣಾ ಉಪಕರಣಗಳ ತಯಾರಿಕೆಯನ್ನು ಉತ್ತೇಜಿಸುವ ಸರಕಾರದ ಯೋಜನೆಯನ್ನೂ ವಿಳಂಬಿಸಲಿದೆ.

ವಿದೇಶಿ ಮಾರಾಟಗಾರರಿಂದ ತಂತ್ರಜ್ಞಾನವನ್ನು ಪಡೆದುಕೊಳ್ಳುವ ಮತ್ತು ದೇಶದಲ್ಲಿಯೇ ಮಿಲಿಟರಿ ಉಪಕರಣಗಳನ್ನು ಉತ್ಪಾದಿಸುವ ಉದ್ದೇಶದ ಹೊಸ ‘ವ್ಯೆಹಾತ್ಮಕ ಪಾಲುದಾರಿಕೆ’ಯಡಿ ಈ ಖರೀದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕಿತ್ತು. 2018ರಲ್ಲಿ ಭಾರತದ ರಕ್ಷಣಾ ವೆಚ್ಚವು ಶೇ.5.5 ಏರಿಕೆಯೊಂದಿಗೆ 63.9 ಶತಕೋಟಿ ಡಾ.ಗೆ ತಲುಪಿದ್ದು,ಇದರೊಂದಿಗೆ ರಕ್ಷಣೆಗಾಗಿ ಅತಿ ಹೆಚ್ಚಿನ ವೆಚ್ಚವನ್ನು ಮಾಡುವ ವಿಶ್ವದ ಅಗ್ರ ಐದು ರಾಷ್ಟ್ರಗಳಲ್ಲೊಂದಾಗಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನಸ್ಟಿಟ್ಯೂಟ್ ಬುಧವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಹೇಳಿದೆ.

 ನೌಕಾಪಡೆಯು ಕಡಿಮೆಯಾಗುತ್ತಿರುವ ತನ್ನ ಜಲಾಂತರ್ಗಾಮಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಜು.2017ರಲ್ಲಿ ಆರು ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಟೆಂಡರ್‌ಗಳನ್ನು ಕರೆಯುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಬಳಿಕ ಆ.2017ರಲ್ಲಿ 123 ಬಹುಪಯೋಗಿ ಮತ್ತು 111 ಲಘು ಬಳಕೆ ಹೆಲಿಕಾಪ್ಟರ್‌ಗಳ ಖರೀದಿಗಾಗಿ ಎರಡು ಪ್ರಯತ್ನಗಳನ್ನು ನಡೆಸಿತ್ತು. ಆದರೆ ನಿಗದಿತ ಗಡುವಿನೊಳಗೆ ಇವುಗಳಿಗಾಗಿ ಟೆಂಡರ್‌ಗಳನ್ನು ಕರೆಯುವಲ್ಲಿ ಅದು ವಿಫಲಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News