'ಮಾರ್ಚ್ 22' ಸಿನೆಮಾದ ಹಾಡಿಗೆ '65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ' ಪ್ರದಾನ
ಹೊಸದಿಲ್ಲಿ, ಮೇ 4: ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ದುಬೈಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ದಂಪತಿ ನಿರ್ಮಾಣದ ‘ಮಾರ್ಚ್ 22’ ಕನ್ನಡ ಚಿತ್ರದ ಗೀತ ರಚನೆಗೆ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಗುರುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನೀರಿಗೆ ಸಂಬಂಧಿಸಿ ಸಮಾಜದಲ್ಲಿ ಸೌಹಾರ್ದವನ್ನು ಬಿಂಬಿಸುವಂಥ ಕಥಾ ಹಂದರವನ್ನು ಇಟ್ಟುಕೊಂಡು ಎಸಿಎಂಇ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹಾಗೂ ಹಿನ್ನೆಲೆ ಗಾಯಕ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದಲ್ಲಿ, ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ‘ಮಾರ್ಚ್ 22’ ಕನ್ನಡ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ, ವಿಮರ್ಶೆಗಳು ವ್ಯಕ್ತವಾಗಿದ್ದವು.
ಈ ಸಿನೆಮಾದ ಅರ್ಥಗರ್ಭಿತ ಹಾಡು 'ಮುತ್ತು ರತ್ನದ ಪ್ಯಾಟೆ' ಗೀತೆ ರಚನೆಗೆ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 'ಅತ್ಯುತ್ತಮ ಗೀತ ರಚನೆ' ಪ್ರಶಸ್ತಿಯನ್ನು ಗೀತ ರಚನಕಾರ ಪ್ರಹ್ಲಾದ್ ಅವರು ಹರೀಶ್ ಶೇರಿಗಾರ್ ಉಪಸ್ಥಿತಿಯಲ್ಲಿ ಸ್ವೀಕರಿಸಿದರು. ಪ್ರಶಸ್ತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಮತ್ತು ರಾಜ್ಯ ಖಾತೆಯ ಸಚಿವ ರಾಜ್ಯವರ್ಧನ ರಾಥೋಡ್ ಪ್ರದಾನ ಮಾಡಿದರು.
ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಮಾರ್ಚ್-22’ ಆಯ್ಕೆಯಾಗಿತ್ತು. ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವ ಈ ಚಿತ್ರದ 'ಮುತ್ತು ರತ್ನದ ಪ್ಯಾಟೆ' ಹಾಡಿನಲ್ಲಿ ಹೆಸರಾಂತ ಅನಿವಾಸಿ ಉದ್ಯಮಿ, ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್.ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. ಈ ಹಾಡಿಗೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ಬಾಲಿವುಡ್'ನ ಖ್ಯಾತ ಗಾಯಕ ಕೈಲಾಶ್ ಖೇರ್ ಅದ್ಭುತವಾಗಿ ಹಾಡಿದ್ದಾರೆ.
ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಈ ಸಿನೆಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಹಾಗೂ ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶಿಶ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈ ಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್ ಸೇರಿದಂತೆ ಹಲವು ಹಿರಿಯ ನಟ-ನಟಿಯರು ನಟಿಸಿದ್ದಾರೆ. ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.
‘ಮಾರ್ಚ್-22’ ಹರೀಶ್ ಶೇರಿಗಾರ್ ದಂಪತಿ ನಿರ್ಮಾಣದ ಚೊಚ್ಚಲ ಚಿತ್ರವಾಗಿತ್ತು. ಈ ದಂಪತಿ ನಿರ್ಮಾಣದ ನಟ ಜೈಜಗದೀಶ್ ಅವರ ಮಕ್ಕಳ 'ಯಾನ' ಹಾಗೂ ಅನಂತ್ ನಾಗ್-ರಾಧಿಕಾ ಚೇತನ್ ನಟನೆಯ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರಗಳು ತೆರೆಕಾಣಲು ಸಿದ್ಧವಾಗಿವೆ.