ದಿಲ್ಲಿ ದರ್ಬಾರ್

Update: 2018-05-05 18:53 GMT

► ಕಹಿ ಪೇ ನಿಗಾಹೆ, ಕಹಿ ಪೇ ನಿಶಾನಾ

ಕಾಂಗ್ರೆಸ್‌ನ ಹಸ್ತ ಮುಸ್ಲಿಮರ ರಕ್ತದ ಕಲೆ ಹೊಂದಿದೆ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದರು. ಅಲಿಗಡ ಮುಸ್ಲಿಂ ವಿವಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಖುರ್ಷಿದ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಮುಖಂಡ ಆ ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಹೇಳಿದರೂ ಇದರಿಂದ ಎದ್ದ ವಿವಾದ ತಿಳಿಯಾಗುವಂತೆ ಕಾಣುತ್ತಿಲ್ಲ. ಖುರ್ಷಿದ್ ಹೇಳಿಕೆ ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಹಿಡಿದ ಕನ್ನಡಿ ಎಂದು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ ಬಳಿಕ ವಿವಾದ ಸ್ವಲ್ಪಮಟ್ಟಿಗೆ ತಣ್ಣಗಾಗಿದೆ. ಇವೆಲ್ಲಕ್ಕೂ ಖುರ್ಷಿದ್ ಪ್ರೇಕ್ಷಕರಾಗಿದ್ದಾರೆ. ಆದರೆ ವೀಕ್ಷಕರು ವಿಶ್ಲೇಷಿಸುವಂತೆ ಖುರ್ಷಿದ್ ಹೇಳಿಕೆಗೆ ವಿಶೇಷ ಅರ್ಥವಿದೆ. 2019ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೇಳಿಕೆ ನೀಡಿರಬೇಕು ಎನ್ನುವುದು ಕೆಲವರ ಅಭಿಮತ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫರೂಕಾಬಾದ್ ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದ ಖುರ್ಷಿದ್, ಠೇವಣಿ ಕಳೆದುಕೊಂಡಿದ್ದರು. ಇದೀಗ ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಮೈತ್ರಿಕೂಟ ರಚನೆಯಾಗುವ ಲಕ್ಷಣಗಳು ಕಾಣುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಗೆಲ್ಲುವ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಕೂಡಾ ವಿರೋಧ ಪಕ್ಷಗಳ ಜತೆ ಕೈಜೋಡಿಸಿದರೂ, ಪ್ರಮುಖ ಪ್ರಾದೇಶಿಕ ಪಕ್ಷಗಳು ಈ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ, ಖುರ್ಷಿದ್ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನದನ್ನು ಕಾದು ನೋಡಬೇಕು.

► ಬಬೂಲ್ ಸುಪ್ರಿಯೊ ದಿನಗಣನೆ?

ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆ ರಾಜ್ಯ ಸಚಿವ ಬಬುಲ್ ಸುಪ್ರಿಯೊ ಅವರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಪಕ್ಷದ ವರಿಷ್ಠರಿಗೆ ಅವರ ಬಗೆಗಿನ ಭಿನ್ನ ವರದಿಗಳು ತಲುಪಿದ್ದರೂ, ಸುಪ್ರಿಯೊ ವೈಖರಿ ಅವರಿಗೆ ಸಮಾಧಾನ ತಂದಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಮೂಲಗಳ ಪ್ರಕಾರ, ಸುಪ್ರಿಯೊ ಕೆಲ ಉನ್ನತ ಅಧಿಕಾರಿಗಳ ಜತೆ, ದಾರಿಹೋಕರ ಜತೆ ಹಾಗೂ ತಮ್ಮ ಸಿಬ್ಬಂದಿ ಜತೆಯೂ ಜಗಳವಾಡಿದ್ದಾರೆ. ಈ ಪೈಕಿ ಕೆಲವು ಹಿಂಸಾತ್ಮಕ ತಿರುವನ್ನೂ ಪಡೆದಿದೆ. ಆದರೆ ಈ ವರದಿಗಳು ಇನ್ನೂ ವದಂತಿ ಹಂತದಲ್ಲಿವೆ. ಮುಂಗೋಪಕ್ಕೆ ಕುಖ್ಯಾತರಾಗಿರುವ ಸಚಿವರಿಗೆ ಈಗಾಗಲೇ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಬಹುತೇಕ ಪ್ರಧಾನಿ ಕಚೇರಿಯಿಂದ ಇಲ್ಲವೇ ಪಕ್ಷದ ಹಿರಿಯ ಮುಖಂಡರಿಂದ ಅವರಿಗೆ ನೇರವಾಗಿ ಎಚ್ಚರಿಕೆ ನೀಡುವ ಎಲ್ಲ ಸಾಧ್ಯತೆಗಳಿವೆ. ಕಾದು ನೋಡಿ.

 ► ಕಮಲ್‌ನಾಥ್ ತಂತ್ರ

ಕಮಲ್‌ನಾಥ್ ಈಗ ದೂರದೃಷ್ಟಿಯ ಗುರಿ ಹೊಂದಿದ ವ್ಯಕ್ತಿ. ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯುವ ಕಾರ್ಯತಂತ್ರವನ್ನು ಕಮಲ್‌ನಾಥ್ ಹೆಣೆಯುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ರಾಜ್ಯದ ಪಕ್ಷದ ಕಾರ್ಯಕರ್ತರು ಹೃದಯಪೂರ್ವಕವಾಗಿ ಕಮಲ್‌ನಾಥ್ ಬೆಂಬಲಕ್ಕೆ ನಿಲ್ಲಬೇಕಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಒಡೆದ ಮನೆ. ಇದನ್ನು ಅರಿತೇ ಹೊಸ ರಾಜ್ಯಾಧ್ಯಕ್ಷರು, ಪ್ರಾದೇಶಿಕ ಹಂತದ ನಾಯಕರನ್ನು ತಲುಪಿ ಮುಂಬರುವ ಚುನಾವಣೆಯಲ್ಲಿ ಅವರಿಗೆ ನಿರ್ದಿಷ್ಟ ಕಾರ್ಯಭಾರವನ್ನು ವಹಿಸುವ ಮೂಲಕ ಅವರ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಈ ಪ್ರಕ್ರಿಯೆಯನ್ನು ಸುಲಲಿತಗೊಳಿಸುವ ಸಲುವಾಗಿ ರಾಜ್ಯದ ಹಿರಿಯ ಮುಖಂಡರ ಜತೆ ಸಮನ್ವಯ ಜವಾಬ್ದಾರಿಯನ್ನು ವಿವೇಕ್ ಟೆಂಖಾ ಎಂಬ ವಕೀಲ- ರಾಜಕಾರಣಿಗೆ ವಹಿಸಲಾಗಿದೆ. ಜತೆಗೆ ವ್ಯಾಪಂ ಹಗರಣದ ಬಿಸಿಯನ್ನು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮುಟ್ಟಿಸಲೂ ಸೂಚಿಸಲಾಗಿದೆ. ಕೆಲ ವರದಿಗಳ ಪ್ರಕಾರ, ಕಮಲ್‌ನಾಥ್ ಅವರ ವ್ಯವಸ್ಥಾಪಕರು ಈಗಾಗಲೇ ಹಿರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಆದರೆ ಕಮಲ್‌ನಾಥ್ ಅವರಿಗೆ ಭಡ್ತಿ ದೊರೆತ ಬಗ್ಗೆ ಅಷ್ಟೊಂದು ಸಂತಸ ಹೊಂದದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ನಿರ್ವಹಿಸುವುದೇ ಕಮಲ್ ಮುಂದಿರುವ ದೊಡ್ಡ ಸವಾಲು.

► ನಾಯ್ಡು ದೂರಾಲೋಚನೆ

ತೆಲುಗುದೇಶಂ ಪಕ್ಷ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ)ದಿಂದ ಹೊರಬಿದ್ದ ಬಳಿಕ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸರಕಾರದ ಅತ್ಯಂತ ಕಟು ಟೀಕಾಕಾರರಾಗಿದ್ದಾರೆ. ಇತ್ತೀಚೆಗೆ ವಿಜಯವಾಡದಲ್ಲಿ ತಮ್ಮನ್ನು ಭೇಟಿ ಮಾಡಿದ ಆಯ್ದ ಪತ್ರಕರ್ತರ ಜೊತೆ ತೆಲುಗುದೇಶಂ ಮುಖ್ಯಸ್ಥ ತಮ್ಮ ಸಿಟ್ಟಿನ ಕಾವು ಹೊರಹಾಕಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯ ಸಂಭಾವ್ಯ ಫಲಿತಾಂಶದ ಸ್ಪಷ್ಟ ಚಿತ್ರಣವನ್ನು ನಾಯ್ಡು ಪ್ರಸ್ತುತಪಡಿಸಿದರು ಎನ್ನಲಾಗಿದೆ. ನಾಯ್ಡು ಅವರ ಪ್ರಕಾರ ಬಿಜೆಪಿಗೆ ಲಾಭವಾಗುವುದು ಈಶಾನ್ಯ ರಾಜ್ಯಗಳಲ್ಲಿ ಮಾತ್ರ. ಈ ಪ್ರದೇಶದಲ್ಲಿ ಆಡಳಿತ ಪಕ್ಷ ಹತ್ತು ಸ್ಥಾನಗಳನ್ನು ಗೆದ್ದರೂ, ಇತರ ರಾಜ್ಯಗಳಲ್ಲಿ ಅದು ಕಳೆದುಕೊಂಡ ಸ್ಥಾನಗಳ ಸಂಖ್ಯೆಯನ್ನು ಭರ್ತಿ ಮಾಡಲು ಇದು ಸಾಕಾಗುವುದಿಲ್ಲ. ಬಿಜೆಪಿ 100ರಿಂದ 150 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎನ್ನುವುದು ನಾಯ್ಡು ನಿರೀಕ್ಷೆ. ದಕ್ಷಿಣದಲ್ಲಿ ಕೇಸರಿ ಪಕ್ಷ ಲಗ್ಗೆ ಹಾಕುವುದು ಕಷ್ಟಸಾಧ್ಯ ಎನ್ನುವುದು ಅವರ ಲೆಕ್ಕಾಚಾರ. ಅಂತೆಯೇ ಪಶ್ಚಿಮದಲ್ಲಿ ಅಂದರೆ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಧೂಳೀಪಟವಾಗುತ್ತದೆ ಎಂಬ ವಿಶ್ಲೇಷಣೆ ಅವರದ್ದು. 2019ರಲ್ಲಿ ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿರುವ ನಾಯ್ಡು, ಬಿಜೆಪಿಗೆ ಪಾಠ ಕಲಿಸಬೇಕು ಎಂಬ ಹವಣಿಕೆಯಲ್ಲಿದ್ದಾರೆ. ಇದೇ ವೇಳೆ ಅಗತ್ಯ ಬಿದ್ದರೆ ಇತರ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿಲ್ಲ. ಆದರೆ ಮತ್ತೆ ರಾಜ್ಯಕ್ಕಾಗಿ ತಾನು ಹೀಗೆ ಮಾಡಿದ್ದಾಗಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ.

► ನಾಯಕನ ಹಾದಿಯಲ್ಲಿ ಸಿಸೋಡಿಯಾ

ಮೌನ ಬಂಗಾರ ಮಾತ್ರವಲ್ಲ; ಬಹುಶಃ ಆಕರ್ಷಕ ಕೂಡಾ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ವಿಪಸನದ ಪ್ರಯೋಗದಲ್ಲಿದ್ದಾರೆ. ವಿಪಸನ ಎನ್ನುವುದು ಧ್ಯಾನ ಮತ್ತು ಮೌನದ ಸ್ಥಿತಿ. ಇದು ಕನಿಷ್ಠ ಪಕ್ಷ ಆರಂಭಿಕ ದಿನಗಳಲ್ಲಿ ಪಕ್ಷದ ಮಟ್ಟದಲ್ಲಿ ಪ್ರಸರಣ ಪರಿಣಾಮ ಬೀರಿದೆ. ಅವರ ಹಲವಾರು ಮಂದಿ ಅನುಯಾಯಿಗಳು ದೇಶಾದ್ಯಂತ ವಿಪಸನ ಕೇಂದ್ರಗಳ ಸುತ್ತ ಸುಳಿಯುತ್ತಿದ್ದಾರೆ. ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೆಲ ಸಮಯದ ಮಟ್ಟಿಗಾದರೂ, ಹೇಗೋ ಅದರಿಂದ ದೂರ ಉಳಿದಿದ್ದರು. ಆದರೆ ಅವರು ಕೂಡಾ ಕೇಜ್ರಿವಾಲ್ ನಡೆ ಅನುಸರಿಸುವ ಇಚ್ಛೆಯಲ್ಲಿದ್ದಂತಿದೆ. ಸಿಸೋಡಿಯಾ ಇತ್ತೀಚೆಗೆ, ರಾಜಸ್ಥಾನದಲ್ಲಿ 10 ದಿನಗಳ ವಿಪಸನ ಶಿಬಿರದ ವೇಳೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಹಲವು ಖಾತೆಗಳನ್ನು ನಿಭಾಯಿಸುತ್ತಿದ್ದ ಅವರ ದಿಲ್ಲಿಯಲ್ಲಿನ ಇರುವಿಕೆಯ ಅಗತ್ಯವನ್ನು ಹಲವರು ಮನಗಂಡದ್ದು ಸುಳ್ಳಲ್ಲ. ಆದರೆ ನಿಮ್ಮ ಮುಖಂಡರನ್ನೇ ನೀವು ಅನುಸರಿಸುವುದಾದರೆ, ನಿಮ್ಮನ್ನು ಯಾರು ತಾನೇ ಪ್ರಶ್ನಿಸಲು ಸಾಧ್ಯ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News