ಯಾರದ್ದೋ ಪಾರ್ಸೆಲ್ ನಿಮ್ಮನ್ನು ‘ಭಯೋತ್ಪಾದಕ’ನನ್ನಾಗಿಸಬಹುದು

Update: 2018-05-08 06:06 GMT

ವಿದೇಶಕ್ಕೆ ಹೊರಟವರು ತಮ್ಮ ಬಳಿಗೆ ಯಾರಾದರೂ ಕಳುಹಿಸುವ ಪಾರ್ಸೆಲ್‌ಗಳ ಕುರಿತಂತೆ ವಿಶೇಷ ಎಚ್ಚರ ವಹಿಸಬೇಕಾದುದು ಮತ್ತು ಆ ವಸ್ತು ನಿಜಕ್ಕೂ ಏನು ಎಂಬುದನ್ನು ಖುದ್ದಾಗಿ ಪರೀಕ್ಷಿಸಿ ನೋಡುವುದು ಅತ್ಯವಶ್ಯಕವಾಗಿದೆ. ಅನ್ಯಥಾ ಯಾವುದಾದರೂ ದೊಡ್ಡ ಅನಾಹುತಕ್ಕೆ ಸಿಲುಕಿ ಕೊಳ್ಳುವ ಅಪಾಯ ಖಂಡಿತ ಇದೆ. 


ಇದೊಂದು ಆತಂಕಕಾರಿ ಬೆಳವಣಿಗೆ. ಗಲ್ಫ್‌ದೇಶಗಳಿಗೆ ಪ್ರಯಾ ಣಿಸುವ ಎಷ್ಟೋ ಮುಗ್ಧಮಂದಿ, ತಮ್ಮ ಪರಿಚಯಸ್ಥರಿಗೆ ಅಥವಾ ಬಂಧುಗಳಿಗೆ ತಲುಪಿಸಲಿಕ್ಕೆಂದು ಯಾರೋ ಕೊಟ್ಟ ಪಾರ್ಸೆಲ್‌ಗಳನ್ನು ತಮ್ಮ ಜೊತೆ ಒಯ್ದು ತೀವ್ರ ಪೇಚಿಗೆ ಸಿಲುಕುವ ಘಟನೆಗಳು ನಿತ್ಯ ವರದಿಯಾಗುತ್ತಿವೆ. ಯಾರಾದರೂ ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬ ಸುದ್ದಿ ಸಿಕ್ಕೊಡನೆ ಕೆಲವರು ಅವರ ಬಳಿಗೆ ಬಂದು, ‘‘ಒಂದು ಸಣ್ಣ ಪಾರ್ಸೆಲ್ ಇದೆ. ನಿಮ್ಮ ಜೊತೆ ಇಟ್ಟು ಕೊಳ್ಳಿ. ನೀವು ಅಲ್ಲಿಗೆ ತಲುಪಿದೊಡನೆ ನಮ್ಮ ಜನ ಬಂದು ಅದನ್ನು ಸಂಗ್ರಹಿಸಿಕೊಳ್ಳುತ್ತಾರೆ, ನೀವು ನಮಗೆ ನಿಮ್ಮ ವಿದೇಶದ ಫೋನ್ ನಂಬರ್ ಕೊಟ್ಟರೆ ಸಾಕು’’ ಎಂದು ದುಂಬಾಲು ಬೀಳುತ್ತಾರೆ. ಎರಡು ಅಥವಾ ನಾಲ್ಕು ಕೆಜಿ ಎಕ್ಸಟ್ರಾ ಲಗ್ಗೇಜು ಸಾಗಿಸುವುದರಿಂದ ಇವರಿಗೆ ಒಂದಷ್ಟು ಉಪಕಾರವಾಗುವುದಾದರೆ ಆಗಲಿ ಎಂದು ಭಾವಿಸಿ ಈ ಆಸಾಮಿ ಅದನ್ನು ತೆಗೆದು ಕೊಳ್ಳುತ್ತಾನೆ. ಅದರ ಒಳಗೆ ಏನಿದೆ ಎಂಬ ಸರಳ ಪ್ರಶ್ನೆಯನ್ನೂ ಆತ ಕೇಳಿರುವುದಿಲ್ಲ. ಪಾರ್ಸೆಲ್ ಕೊಟ್ಟವರು ಅದನ್ನು ತುಂಬಾ ಭದ್ರವಾಗಿ ಪ್ಯಾಕು ಮಾಡಿರುತ್ತಾರೆ. ಆದ್ದರಿಂದ ಈ ಆಸಾಮಿ ಅದರ ಒಳಗೇನಿದೆ ಎಂದು ತಪಾಸಣೆ ಮಾಡುವ ಗೊಡವೆಗೂ ಹೋಗುವುದಿಲ್ಲ.

ಎಲ್ಲವೂ ಮುಗ್ಧ ವಿಶ್ವಾಸದ ಮೇಲೆ ನಡೆದಿರುತ್ತದೆ. ಕೆಲವೊಮ್ಮೆ ಪಾರ್ಸೆಲ್ ತಂದವರು ಅದರಲ್ಲಿ ಬಟ್ಟೆ ಇದೆ, ಉಪ್ಪಿನ ಕಾಯಿ ಇದೆ, ಸೀಡಿಗಳಿವೆ, ಸಿಹಿ ತಿಂಡಿ ಇದೆ ಎಂದೇನಾದರೂ ಹೇಳಿರುತ್ತಾರೆ. ಸಾಮಾನ್ಯವಾಗಿ ಇಂತಹ ಪಾರ್ಸೆಲ್‌ಗಳು ಸಮಸ್ಯೆಯೇನೂ ಇಲ್ಲದೆ ವಿದೇಶಕ್ಕೆ ತಲುಪಿ ಬಿಡುತ್ತವೆ. ಭಾರತದಲ್ಲಿ ಅಥವಾ ವಿದೇಶದಲ್ಲಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಅಥವಾ ಕಸ್ಟಮ್ಸ್ ಅಧಿಕಾರಿಗಳು ಅಥವಾ ಯಾವುದಾದರೂ ವಿಶೇಷ ಸ್ಕ್ವಾಡ್‌ನವರು ಎಲ್ಲ ಸರಕುಗಳನ್ನು ಬಿಚ್ಚಿ ಅವುಗಳ ತಪಾಸಣೆ ಆರಂಭಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಧಿಕಾರಿಗಳು ಸ್ಕ್ಯಾನಿಂಗ್ ಯಂತ್ರದಲ್ಲಿ ನೋಡಿ ಅಥವಾ ಬ್ಯಾಗು ಬಿಚ್ಚಿ, ಯಾವುದಾದರೂ ನಿರ್ದಿಷ್ಟ ಕಟ್ಟಿನ ಕುರಿತು, ಇದರಲ್ಲೇನಿದೆ? ಎಂದು ವಿಚಾರಿಸಿದರೆ ಪ್ರಯಾಣಿಕ ತಬ್ಬಿಬ್ಬಾಗುತ್ತಾನೆ. ಹಾಗೆ ಆತ ತಬ್ಬಿಬ್ಬಾದೊಡನೆ ಅಧಿಕಾರಿಗಳು ಅವನನ್ನು ಸಂಶಯಿಸಲಾರಂಭಿಸತ್ತಾರೆ. ಕೆಲವು ಸಮಯದ ಹಿಂದೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕ ಇಂತಹದೇ ಸನ್ನಿವೇಶದಲ್ಲಿ ಸಿಕ್ಕಿ ಕೊಂಡು ತುಂಬಾ ಪಾಡು ಪಡಬೇಕಾಗಿ ಬಂದಿತ್ತು. ಅವನ ಲಗ್ಗೇಜನ್ನು ಸ್ಕ್ಯಾನ್ ಮಾಡುವಾಗ ಅಧಿಕಾರಿಗಳು, ಅದರಲ್ಲಿದ್ದ ಒಂದು ಕಟ್ಟನ್ನು ತೋರಿಸಿ ಅದರಲ್ಲೇನಿದೆ ಎಂದು ವಿಚಾರಿಸಿದರು. ಅದರಲ್ಲಿ ಆಹಾರ ಪದಾರ್ಥಗಳಿವೆ ಎಂದು ಆತ ಉತ್ತರಿಸಿದ. ಏಕೆಂದರೆ ಅವನಿಗೆ ಪಾರ್ಸೆಲ್ ಕೊಟ್ಟವರು ಅವನೊಡನೆ ಹಾಗೆಯೇ ಹೇಳಿದ್ದರು.

ಅಧಿಕಾರಿಗಳು ಆ ಕಟ್ಟು ಬಿಚ್ಚಿ ನೋಡಿದಾಗ ಆಹಾರ ಪದಾರ್ಥಗಳ ಮರೆಯಲ್ಲಿ ಕೆಲವು ನಿಗೂಢ ಎಲೆಕ್ಟ್ರಾನಿಕ್ ವಸ್ತುಗಳಿದ್ದವು. ಅವೆಲ್ಲಾ ಏನು ಎಂದು ವಿಚಾರಿಸುವಷ್ಟರಲ್ಲಿ ಪ್ರಯಾಣಿಕ ಗಾಬರಿಯಾಗಿದ್ದ. ಅಧಿಕಾರಿಗಳು ತಕ್ಷಣ ಹುಲಿ ಚಿರತೆಗಳಾಗಿ ಬಿಟ್ಟರು. ಆತ ಪಾರ್ಸೆಲ್ ನಲ್ಲಿ ಬಾಂಬು ಬಚ್ಚಿಟ್ಟು ತಂದಿದ್ದಾನೆ ಎಂದು ಅವರು ಸಂಶಯಿಸಿದರು. ಸಂಶಯ ಕ್ರಮೇಣ ಗಟ್ಟಿಯಾಗತೊಡಗಿತು. ಇದು ಯಾರೋ ತನಗೆ ಕೊಟ್ಟ ಪಾರ್ಸೆಲ್ ಎಂದು ಪ್ರಯಾಣಿಕ ಹೇಳಿದಾಗಲಂತೂ ಆತ ಭಯೋತ್ಪಾದಕನೆಂದು ಮತ್ತು ಆತ ಸುಳ್ಳು ಹೇಳುತ್ತಿದ್ದಾನೆ ಎಂದೇ ಅಧಿಕಾರಿಗಳು ನಂಬಿದರು. ತಕ್ಷಣ ರೆಡ್ ಎಲರ್ಟ್ ಘೋಷಿಸಲಾಯಿತು. ಪೊಲೀಸರು, ಪ್ಯಾರಾ ಮಿಲಿಟರಿ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ಸುತ್ತುವರಿದರು. ಭದ್ರತೆ ನೂರು ಪಟ್ಟು ಅಧಿಕವಾಯಿತು. ದೂರದ ನಗರಗಳಿಂದ ಬಾಂಬ್ ತಜ್ಞರನ್ನು ಕರೆಸಲಾಯಿತು. ಈ ಮಧ್ಯೆ ಆ ಬಡಪಾಯಿ ಯಾವೆಲ್ಲ ಮಟ್ಟದ ‘ವಿಚಾರಣೆ’ ಎದುರಿಸಿರಬಹುದು ಎಂದು ಯಾರಾದರೂ ಊಹಿಸಬಹುದು. ಈ ಬಗ್ಗೆ ಊರೆಲ್ಲಾ ವದಂತಿಗಳು ಹಬ್ಬ ತೊಡಗಿದವು. ಕೆಲವು ಮಾಧ್ಯಮಗಳಂತೂ ನಿರ್ದಿಷ್ಟ ಭಯೋತ್ಪಾದಕ ಸಂಘಟನೆಗಳನ್ನು ಹೆಸರಿಸಿ, ಅವನು ಆ ಸಂಘಟನೆಗೆ ಸೇರಿದವನು ಎಂದು ಅಬ್ಬರದ ಪ್ರಚಾರ ನಡೆಸಿದವು. ಕೊನೆಗೆ, ಆತನ ಲಗೇಜ್‌ನಲ್ಲಿದ್ದ ನಿಗೂಢ ವಸ್ತು ಐ ಪ್ಯಾಡ್‌ನ ಬ್ಯಾಟರಿಯೇ ಹೊರತು ಯಾವುದೇ ಬಾಂಬ್ ಅಲ್ಲ ಎಂಬುದು ಸ್ಪಷ್ಟವಾಯಿತು.

ಪಾರ್ಸೆಲ್ ಕೊಟ್ಟವರು ತಾವು ಕೊಡುತ್ತಿರುವ ಪಾರ್ಸೆಲ್‌ನಲ್ಲಿ ಏನಿದೆ ಎಂಬುದನ್ನು ಆತನಿಗೆ ತಿಳಿಸಿರಲಿಲ್ಲ. ಕೆಲವೇ ವಾರಗಳ ಹಿಂದೆ ನಡೆದ ಇನ್ನೊಂದು ಘಟನೆ ಕೂಡಾ ಪಾಠದಾಯಕವಾಗಿದೆ. ವಿದೇಶಕ್ಕೆ ಹೊರಟಿದ್ದ ವ್ಯಕ್ತಿಯೊಬ್ಬರ ಬಳಿಗೆ ಒಂದು ಪಾರ್ಸೆಲ್ ಬಂತು. ಅದನ್ನು ಕಳಿಸಿದವರು ಅದರಲ್ಲಿ ಲಡ್ಡುಗಳಿವೆ ಎಂದು ತಿಳಿಸಿ ಅದನ್ನು ತಮ್ಮ ಬಂಧುವಿಗೆ ತಲುಪಿಸಬೇಕೆಂದು ಕೇಳಿ ಕೊಂಡಿದ್ದರು. ಪ್ರಯಾಣಿಕನು ಯಾಕೋ ಸ್ವಲ್ಪ ಸಂಶಯಗ್ರಸ್ತನಾಗಿ ಆ ಪಾರ್ಸೆಲ್ ಅನ್ನು ಬಿಚ್ಚಿ, ಅದರೊಳಗಿನ ಲಡ್ಡುಗಳ ತಪಾಸಣೆ ನಡೆಸಿದಾಗ, ಪ್ರತಿಯೊಂದು ಲಡ್ಡುವಿನ ಒಳಗೆ ಮಾದಕ ಪದಾರ್ಥಗಳನ್ನು ಅಡಗಿಸಿರುವುದು ತಿಳಿಯಿತು. ಒಂದು ವೇಳೆ ಆತ ಆ ಪಾರ್ಸೆಲ್ ಅನ್ನು ಪರೀಕ್ಷಿಸದೆ ಹಾಗೆಯೇ ವಿದೇಶಕ್ಕೆ ಒಯ್ದು, ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದರೆ ಒಂದೋ ಆಜೀವ ಜೈಲು ವಾಸ ಅಥವಾ ಗಲ್ಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಅದೃಷ್ಟ ಚೆನ್ನಾಗಿದ್ದರಿಂದ ಆತ ಸಕಾಲದಲ್ಲಿ ಪಾರಾದ. ಇನ್ನೊಂದು ಸನ್ನಿವೇಶ ನೋಡಿ. ಒಬ್ಬ ಪ್ರಯಾಣಿಕ, ದುಬೈ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್‌ಗಾಗಿ ಸರದಿ ಸಾಲಲ್ಲಿ ನಿಂತಿದ್ದಾಗ ಒಬ್ಬ ಮಹಿಳೆ ಬಂದು, ‘‘ನನ್ನ ಲಗ್ಗೇಜ್ ಭಾರ ಅಧಿಕವಾಗಿದೆ. ಇಲ್ಲಿ ವಿಪರೀತ ಬ್ಯಾಗೇಜ್ ಫೀಸ್ ಕಟ್ಟಬೇಕಾಗುತ್ತದೆ. ಚಾಕಲೇಟ್‌ಗಳು ಮಾತ್ರ ಇರುವ ಈ ಒಂದು ಸಣ್ಣ ಬ್ಯಾಗನ್ನು ನೀವು ಹಿಡಿದು ಕೊಂಡರೆ ತುಂಬಾ ಉಪಕಾರವಾಗುತ್ತದೆ’’ ಎಂದು ಮನವಿ ಮಾಡಿದಳು. ಆತ ಮಾನವೀಯ ನೆಲೆಯಲ್ಲಿ ಒಪ್ಪಿ ಅದನ್ನು ಸ್ವೀಕರಿಸಿ ಹ್ಯಾಂಡ್ ಬ್ಯಾಗ್ ಆಗಿ ತನ್ನ ಜೊತೆ ಇಟ್ಟು ಕೊಂಡ. ಆತನ ಬೋರ್ಡಿಂಗ್ ಪಾಸ್‌ನಲ್ಲಿ ಆ ಹ್ಯಾಂಡ್ ಬ್ಯಾಗ್ ಆತನದ್ದೆಂದು ಗುರುತಿಸುವ ಚೀಟಿ ಅಂಟಿಸಿದರು.

ಮುಂದೆ ಸೆಕ್ಯೂರಿಟಿ ತಪಾಸಣೆ ನಡೆಯುವಲ್ಲಿ ಸ್ಕಾನಿಂಗ್ ಯಂತ್ರದಲ್ಲಿ ಆ ಬ್ಯಾಗ್ ಅನ್ನು ಕಂಡ ಅಧಿಕಾರಿಗಳು ಅದರಲ್ಲಿ ಏನಿದೆ ಎಂದು ಸಂಶಯ ಪಟ್ಟು ತೆರೆದು ನೋಡಿದಾಗ ಅದರಲ್ಲಿ ಮಾದಕ ಪದಾರ್ಥಗಳಿದ್ದವು. ಅವರು ಆತನನ್ನು ವಿಚಾರಿಸಿದರು. ಆತ, ಆ ಬ್ಯಾಗು ತನ್ನದಲ್ಲ, ಆ ಮಹಿಳೆಯದ್ದು ಎಂದು ಅದೇ ಸೆಕ್ಯೂರಿಟಿ ವಲಯದಲ್ಲಿ ತುಸು ದೂರದಲ್ಲಿದ್ದ ಆ ಮಹಿಳೆಯನ್ನು ತೋರಿಸಿದ. ಆಕೆ, ತನಗೆ ಆ ಬ್ಯಾಗ್ ಜೊತೆ ಯಾವ ಸಂಬಂಧವೂ ಇಲ್ಲ ಮತ್ತು ಆ ವ್ಯಕ್ತಿಯನ್ನು ತಾನು ಈ ಹಿಂದೆ ಎಲ್ಲೂ ಕಂಡದ್ದಿಲ್ಲ ಎಂದು ಬಿಟ್ಟಳು. ಅಧಿಕಾರಿಗಳು ಆತನನ್ನು ಮತ್ತು ಆ ಮಹಿಳೆಯನ್ನು ವಶಕ್ಕೆ ತೆಗೆದು ಕೊಂಡರು. ಕೊನೆಗೆ ಬೋರ್ಡಿಂಗ್ ಪಾಸ್ ಮಾಡುವ ವಲಯದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಯನ್ನು ನೋಡಿ, ಆತನನ್ನು ಬಿಟ್ಟು ಬಿಟ್ಟರು. ಬಿಡುವ ಮುನ್ನ ಆತನಿಗೆ ಆ ಮಹಿಳೆಯ ಜೊತೆ ಏನಾದರೂ ಸಂಬಂಧ ಇದೆಯೇ ಎಂಬುದನ್ನು ಖಾತರಿ ಪಡಿಸಿ ಕೊಳ್ಳುವುದಕ್ಕಾಗಿ ಸಾಕಷ್ಟು ವಿಚಾರಣೆ ನಡೆಯಿತು. ಸ್ವಲ್ಪ ಊಹಿಸಿ ನೋಡಿ. ಒಂದು ವೇಳೆ ಆತ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದ ಹೊರಗೆಲ್ಲಾದರೂ ಆಕೆಯಿಂದ ಪಡೆದಿರುತ್ತಿದ್ದರೆ ಅದನ್ನು ಸಾಬೀತು ಪಡಿಸಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ.

ಮಾದಕ ದ್ರವ್ಯ ಸಾಗಣೆಗಾಗಿ ಆತ ಗಲ್ಲಿಗೇರಬೇಕಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಿದೇಶಕ್ಕೆ ಹೊರಟವರು ತಮ್ಮ ಬಳಿಗೆ ಯಾರಾದರೂ ಕಳಿಸುವ ಪಾರ್ಸೆಲ್‌ಗಳ ಕುರಿತಂತೆ ವಿಶೇಷ ಎಚ್ಚರ ವಹಿಸಬೇಕಾದುದು ಮತ್ತು ಆ ವಸ್ತು ನಿಜಕ್ಕೂ ಏನು ಎಂಬುದನ್ನು ಖುದ್ದಾಗಿ ಪರೀಕ್ಷಿಸಿ ನೋಡುವುದು ಅತ್ಯವಶ್ಯಕವಾಗಿದೆ. ಅನ್ಯಥಾ ಯಾವುದಾದರೂ ದೊಡ್ಡ ಅನಾಹುತಕ್ಕೆ ಸಿಲುಕಿ ಕೊಳ್ಳುವ ಅಪಾಯ ಖಂಡಿತ ಇದೆ. ಈ ನಿಟ್ಟಿನಲ್ಲಿ ಕೆಲವು ಸರಳ ಸೂಚನೆಗಳನ್ನು ಎಲ್ಲ ಪ್ರಯಾಣಿಕರೂ ನೆನಪಿನಲ್ಲಿಟ್ಟು ಕೊಳ್ಳುವುದು ಸೂಕ್ತ. * ಎಂತಹ ತುರ್ತು ಸನ್ನಿವೇಶವೇ ಇರಲಿ, ಅಪರಿಚಿತರು ಕೊಡುವ ಬ್ಯಾಗು, ಪಾರ್ಸೆಲ್ ಇತ್ಯಾದಿಗಳನ್ನು ತೆಗೆದು ಕೊಳ್ಳಬಾರದು. * ಕೇವಲ ಕೆಲವು ನಿಮಿಷಗಳಿಗಾಗಿ ಹಿಡಿದುಕೊಳ್ಳಿ ಎಂದು ಯಾರಾದರೂ ಬ್ಯಾಗ್ ಪಾರ್ಸೆಲ್ ಇತ್ಯಾದಿಗಳನ್ನು ಕೊಟ್ಟರೂ ತೆಗೆದು ಕೊಳ್ಳಬಾರದು. *ಬ್ಯಾಗ್, ಪಾರ್ಸೆಲ್ ಇತ್ಯಾದಿಗಳನ್ನು ತಂದು ಕೊಡುವವರು ಪರಿಚಿತರಾಗಿದ್ದರೂ, ಬಂಧುಗಳಾಗಿದ್ದರೂ ಕಣ್ಣು ಮುಚ್ಚಿ ನಂಬಬೇಡಿ. * ಕೆಲವೊಮ್ಮೆ ಅವರಿಗೂ ಗೊತ್ತಿಲ್ಲದಂತೆ ಯಾರಾದರೂ ಅವರ ಮೂಲಕ ಮೋಸ ಮಾಡುತ್ತಿರಬಹುದು. * ಪಾರ್ಸೆಲ್ ಅನ್ನು ತುಂಬಾ ಭದ್ರವಾಗಿ ಪ್ಯಾಕ್ ಮಾಡಲಾಗಿದೆ ಎಂಬ ಕಾರಣಕ್ಕೆ ಅದನ್ನು ತೆರೆಯಲು ಹಿಂಜರಿಯ ಬೇಡಿ. *ಶೇ. 100 ಸುರಕ್ಷಿತ ಎಂದು ಖಚಿತವಾದ ಬಳಿಕ ಮಾತ್ರ ಇತರರ ಬ್ಯಾಗ್, ಪಾರ್ಸೆಲ್‌ಗಳನ್ನು ಒಯ್ಯಿರಿ 

Writer - ಮಾಜಿದ್, ಬೆಳ್ತಂಗಡಿ

contributor

Editor - ಮಾಜಿದ್, ಬೆಳ್ತಂಗಡಿ

contributor

Similar News