ಸಿಜೆಐ ಪದಚ್ಯುತಿ ನೋಟಿಸ್ ತಿರಸ್ಕಾರ: ಇಂದು ವಿಚಾರಣೆ
ಹೊಸದಿಲ್ಲಿ, ಮೇ 8: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ರಾಜ್ಯಸಭೆಯಲ್ಲಿ ವಾಗ್ದಂಡನೆ ನಿರ್ಣಯ ಮಂಡಿಸಲು ಅವಕಾಶ ನೀಡದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕ್ರಮವನ್ನು ಪ್ರಶ್ನಿಸಿ ಇಬ್ಬರು ಕಾಂಗ್ರೆಸ್ ಸಂಸದರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಐವರು ನ್ಯಾಯಾಧೀಶರ ಸಂವಿಧಾನಪೀಠ ನಡೆಸಲಿದೆ.
ಸಿಜೆಐ ವಿರುದ್ಧದ ಪ್ರಕರಣ ಇದಾಗಿರುವ ಹಿನ್ನೆಲೆಯಲ್ಲಿ ಸಂವಿಧಾನ ಪೀಠವನ್ನು ಯಾರು ನೇಮಕ ಮಾಡಿದ್ದಾರೆ ಎನ್ನುವುದು ಖಚಿತವಾಗಿ ತಿಳಿದುಬಂದಿಲ್ಲ. ಸಾಮಾನ್ಯವಾಗಿ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳ ಹಂಚಿಕೆ ಮಾಡುವ ಮತ್ತು ನ್ಯಾಯಪೀಠ ನೇಮಿಸುವ ಕಾರ್ಯ ನಿರ್ವಹಿಸುತ್ತಾರೆ.
ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ, ಎನ್.ವಿ.ರಮಣ, ಅರುಣ್ ಮಿಶ್ರ ಮತ್ತು ಆದರ್ಶ ಕುಮಾರ್ ಗೋಯಲ್ ಇದ್ದಾರೆ. ಆದರೆ ಜನವರಿ 12ರಂದು ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಸಿಜೆಐ ವಿರುದ್ಧ ಕೆಂಡಕಾರಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪೈಕಿ ಯಾರೂ ಈ ಪೀಠದಲ್ಲಿಲ್ಲ. ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ, ರಂಜನ್ ಗೊಯೋಯ್, ಎಂ.ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರ ಹೆಸರು ನ್ಯಾಯಪೀಠದಲ್ಲಿ ಸೇರಿಲ್ಲ.