ಅವಮಾನದಿಂದ ತಲೆ ತಗ್ಗಿಸುವಂಥ ಘಟನೆ: ಮೆಹಬೂಬಾ ಮುಫ್ತಿ

Update: 2018-05-08 04:59 GMT

ಶ್ರೀನಗರ, ಮೇ 8: ಕಾಶ್ಮೀರ ಹಿಂಸಾಚಾರಕ್ಕೆ ಪ್ರವಾಸಿಯೊಬ್ಬರು ಬಲಿಯಾಗಿರುವ ಘಟನೆಯನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ "ನಾನು ಅವಮಾನದಿಂದ ತಲೆ ತಗ್ಗಿಸುತ್ತಿದ್ದೇನೆ. ಇದು ಹೃದಯವಿದ್ರಾವಕ ಹಾಗೂ ಖೇದಕರ ಘಟನೆ" ಎಂದು ಬಣ್ಣಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಹಿಂಸಾಚಾರಕ್ಕೆ ಪ್ರವಾಸಿಯೊಬ್ಬರು ಬಲಿಯಾಗಿರುವುದು ಇದೇ ಮೊದಲು. ಕಾಶ್ಮೀರಕ್ಕೆ ಪ್ರವಾಸ ಬಂದಿದ್ದ ಚೆನ್ನೈ ಮೂಲದ 22 ವರ್ಷದ ಯುವಕನೊಬ್ಬ ಕಲ್ಲು ತೂರಾಟದಿಂದ ತೀವ್ರ ಗಾಯಗೊಂಡು ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರನ್ನು ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಘಟನೆಯಲ್ಲಿ ಹಂದ್ವಾರಾದ 19 ವರ್ಷದ ಯುವತಿಯೊಬ್ಬಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೃತ ವ್ಯಕ್ತಿಯನ್ನು ಚೆನ್ನೈ ನಿವಾಸಿ ರಾಜವಾಳಿ ಎಂಬವರ ಪುತ್ರ ತಿರುಮಣಿ ಎಂದು ಗುರುತಿಸಲಾಗಿದೆ. ಕಾಶ್ಮೀರದ ಬುಡ್‌ಗಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಕಲ್ಲು ತೂರಾಟ ನಡೆಸುವ ಗುಂಪಿನ ನಡುವೆ ಘರ್ಷಣೆ ನಡೆಯುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಕಲ್ಲು ಬಿದ್ದು, ತೀವ್ರ ಗಾಯಗೊಂಡಿದ್ದರು. ಬಳಿಕ ಎಸ್‌ಕೆಐಎಂಎಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಘಟನೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೂ ಟ್ವೀಟ್ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಹಿಂಸಾಚಾರ ವ್ಯಾಪಕವಾಗಿದ್ದು, ವಿವಿಧ ಘಟನೆಗಳಲ್ಲಿ 24 ಮಂದಿ ಜೀವ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News