×
Ad

2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ:ಮಾಯಾವತಿ

Update: 2018-05-08 10:56 IST

ಲಕ್ನೊ, ಮೇ 8: ಉತ್ತರಪ್ರದೇಶದ ವಿಪಕ್ಷಗಳ ಒಗ್ಗಟ್ಟಿಗೆ ಹೊಸ ಶಕ್ತಿ ತುಂಬುವ ಬೆಳವಣಿಗೆಯೊಂದು ನಡೆದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸುವುದಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯ ಕೊನೆಗೊಂಡ ಬಳಿಕ ಮೈತ್ರಿ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮಾಯಾವತಿ ಹೇಳಿದ್ದಾರೆ.

‘‘ಸೀಟು ಹಂಚಿಕೆ ವಿಚಾರ ಅಂತ್ಯಗೊಂಡ ಬೆನ್ನಿಗೇ ಮೈತ್ರಿಯನ್ನು ಘೋಷಿಸಲಾಗುತ್ತದೆ. ಲೋಕಸಭಾ ಚುನಾವಣೆಗೆ ಇನ್ನೂ ಕೆಲವು ಸಮಯವಿದೆ. ಚುನಾವಣೆಗೆ ಸಮೀಪವಾಗುವಾಗ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇವೆ. ಅಧಿಕೃತ ಘೋಷಣೆಯಾಗದಿದ್ದರೂ ಜನರಲ್ಲಿ ಈಗಾಗಲೇ ಎಸ್ಪಿ-ಬಿಎಸ್ಪಿ ಮೈತ್ರಿ ಬಗ್ಗೆ ಅರಿವು ಉಂಟಾಗಿದೆ’’ ಎಂದು ಎನ್‌ಡಿಟಿವಿಗೆ ಮಾಯಾವತಿ ತಿಳಿಸಿದ್ದಾರೆ.

 2014ರ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳ ಒಟ್ಟು ಮತ ಹಂಚಿಕೆ ಪ್ರಮಾಣ 41.8 ಶೇ.ದಷ್ಟಿತ್ತು. ಬಿಜೆಪಿ ಹಾಗೂ ಅಪ್ನಾ ದಳ ಮೈತ್ರಿ ಪಕ್ಷಕ್ಕೆ 46.3 ಶೇ. ಮತ ಹಂಚಿಕೆಯಾಗಿತ್ತು. ಬಿಜೆಪಿ ಮೈತ್ರಿಕೂಟ ಉತ್ತರಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 73ರಲ್ಲಿ ಜಯ ಸಾಧಿಸಿತ್ತು. ಆಗ ಎಸ್ಪಿ ಹಾಗೂ ಬಿಎಸ್ಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಎಸ್ಪಿ ಕೇವಲ 5 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೆ, ಬಿಎಸ್ಪಿ ಶೂನ್ಯ ಸಾಧನೆ ಮಾಡಿತ್ತು. 7.5 ಶೇ. ಮತ ಹಂಚಿಕೆ ಪಡೆದಿದ್ದ ಕಾಂಗ್ರೆಸ್ 2 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಮಾರ್ಚ್‌ನಲ್ಲಿ ನಡೆದ ಗೋರಖ್‌ಪುರ ಹಾಗೂ ಫುಲ್ಪುರ ಲೋಕಸಭಾ ಉಪ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಬಿಜೆಪಿಯನ್ನು ಧೂಳೀಪಟಗೊಳಿಸಿತ್ತು. ಮಾಯಾವತಿ ಕೊನೆಯ ಕ್ಷಣದಲ್ಲಿ ಎಸ್ಪಿಗೆ ಬೆಂಬಲ ಘೋಷಿಸಿದ್ದರು. ಮುಂಬರುವ ಕೈರಾನಾ ಲೋಕಸಭಾ ಹಾಗೂ ನೂರ್ಪುರ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಎಸ್ಪಿ ಹಾಗೂ ಆರ್‌ಜೆಡಿ ಅಭ್ಯರ್ಥಿಗಳೊಂದಿಗೆ ಕಾರ್ಯನಿರ್ವಹಿಸುವಂತೆ ತನ್ನ ಪಕ್ಷದ ಕಾರ್ಯಕರ್ತರಿಗೆ ಮಾಯಾವತಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News