ಸಮಾನ ಅಂಕ ಪಡೆದು ಮೆಟ್ರಿಕ್ ಪರೀಕ್ಷೆ ತೇರ್ಗಡೆಗೊಂಡ ತಂದೆ-ಮಗ
ಭುಬನೇಶ್ವರ್,ಮೇ.8 : ಒಡಿಶಾದ ಬಲಸೋರ್ ಜಿಲ್ಲೆಯಲ್ಲಿ ತಂದೆ-ಮಗ ಇಬ್ಬರೂ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಸಮಾನ ಅಂಕಗಳನ್ನು ಪಡೆದು ತೇರ್ಗಡೆಗೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ಅರುಣ್ ಕುಮಾರ್ ಬೆಜ್ (58) ಎಂಬವರು ಜಿಲ್ಲೆಯ ಹಿರಿಯ ಬಿಜೆಪಿ ನಾಯಕರಾಗಿದ್ದು, ಏಳನೇ ತರಗತಿಯಲ್ಲಿರುವಾಗಲೇ ಅವರ ತಂದೆ ತೀರಿಕೊಂಡ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಇದೀಗ ಅವರು ತಮ್ಮ 30 ವರ್ಷದ ಪುತ್ರ ಕುಮಾರ್ ಬಿಸ್ವಜೀತ್ ಬೆಜ್ ಜತೆ ಸೇರಿ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಕುಮಾರ್ ಬಿಸ್ವಜೀತ್ ಕೂಡ ಈ ಹಿಂದೆ 2004ರಲ್ಲಿ ಮೆಟ್ರಿಕ್ಯುಲೇಶನ್ ಪಾಸಾಗಿರಲಿಲ್ಲ. ನಂತರ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡ ಅವರು ಉದ್ಯಮ ಕ್ಷೇತ್ರದತ್ತ ಹೊರಳಿ ಗ್ರಾಮದಲ್ಲಿ ಸ್ಟೇಶನರಿ ಅಂಗಡಿಯೊಂದನ್ನು ತೆರೆದಿದ್ದರು. ಅವರ ಕುಟುಂಬದಲ್ಲಿ ಎಲ್ಲರೂ ಮೆಟ್ರಿಕ್ಯುಲೇಶನ್ ಗಿಂತ ಅಧಿಕ ಶಿಕ್ಷಣ ಪಡೆದವರಾಗಿದ್ದಾರೆ.
ಇಬ್ಬರೂ ತಲಾ 342 ಅಂಕಗಳನ್ನು ಪಡೆದಿದ್ದಾರೆ. ಒಡಿಶಾ ಸ್ಟೇಟ್ ಓಪನ್ ಸ್ಕೂಲ್ ವಿದ್ಯಾರ್ಥಿಗಳಾಗಿರುವ ಇವರು ಶಿಕ್ಷಣ ಪಡೆಯಲು ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ್ದಾರೆ.
ಮೆಟ್ರಿಕ್ಯುಲೇಶನ್ ತೇರ್ಗಡೆಗೊಂಡ ನಂತರ ಅತ್ಯುತ್ಸಾಹದಲ್ಲಿರುವ ಅರುಣ್ ಕುಮಾರ್ ಬೆಜ್ ಇಂದಿರಾ ಗಾಂಧಿ ಮುಕ್ತ ವಿವಿ ಮೂಲಕ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ್ದಾರಲ್ಲದೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದಾರೆ. 2014 ವಿಧಾನಸಭಾ ಚುನಾವಣೆಯಲ್ಲಿ ಜಲೇಸ್ವರ್ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಸೋಲುಂಡಿದ್ದರು.