ಉಪ ರಾಷ್ಟ್ರಪತಿ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದ ಕಾಂಗ್ರೆಸ್
ಹೊಸದಿಲ್ಲಿ, ಮೇ 8: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪದಚ್ಯುತಿಗೆ ಆಗ್ರಹಿಸಿ ಕಾಂಗ್ರೆಸ್ ಸಂಸದರು ಸಲ್ಲಿಸಿದ್ದ ನಿಲುವಳಿ ನೋಟಿಸನ್ನು ತಿರಸ್ಕೃರಿಸಿದ್ದ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಮಂಗಳವಾರ ವಾಪಸ್ ಪಡೆದಿದ್ದಾರೆ.
ಕಾಂಗ್ರೆಸ್‌ನ ಇಬ್ಬರು ರಾಜ್ಯಸಭಾ ಸದಸ್ಯರಾದ ಪಂಜಾಬ್‌ನ ಪ್ರತಾಪ್ ಸಿಂಗ್ ಬಾಜ್ವಾ ಹಾಗೂ ಗುಜರಾತ್‌ನ ಆಮೀ ಹರ್ಷದೇವ್ ಯಾಜ್ನಿಕ್ ರಾಜ್ಯಸಭೆಯ ಸಭಾಪತಿ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ನ್ಯಾ. ಎ.ಕೆ. ಸಿಕ್ರಿ, ನ್ಯಾ.ಎಸ್.ಐ. ಬೋಬ್ಡೆ, ಎನ್.ವಿ. ರಮಣ, ನ್ಯಾ. ಅರುಣ್ ಕೆ.ಮಿಶ್ರಾ ಹಾಗೂ ಆದಶ್ ಕೆ. ಗಿರಿ ಅವರನ್ನೊಳಗೊಂಡ ಪಂಚ ಸದಸ್ಯರ ನ್ಯಾಯ ಪೀಠ ಅರ್ಜಿಯ ವಿಚಾರಣೆ ನಡೆಸಬೇಕಾಗಿತ್ತು. ಅರ್ಜಿಯ ವಿಚಾರಣೆ ನಡೆಸಲು ಪಂಚ ಸದಸ್ಯರ ನ್ಯಾಯಪೀಠ ರಚನೆಗೆ ನಿರ್ದೇಶಿಸಿರುವ ಆಡಳಿತಾತ್ಮಕ ವಿವರವನ್ನು ನೀಡುವಂತೆ ಕಪಿಲ್ ಸಿಬಲ್ ನ್ಯಾಯಾಲಯವನ್ನು ವಿನಂತಿಸಿದರು. ಸಿಬಲ್ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ಕಾರಣ ಸಿಬಲ್ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.
ಇಂತಹ ಆದೇಶ ನೀಡಿದ್ದು ಯಾರು: ಸಿಬಲ್ ಪ್ರಶ್ನೆ
‘‘ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಪದಚ್ಯುತಿಗೆ ಆಗ್ರಹಿಸಿ ಸಲ್ಲಿಸಿದ್ದ ನಿಲುವಳಿಯನ್ನು ತಿರಸ್ಕರಿಸಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನಿರ್ಧಾರ ಪ್ರಶ್ನಿಸಿ ನಾವು ನಿನ್ನೆ ಅರ್ಜಿ ಸಲ್ಲಿಸಿದ್ದೆವು. ಇಂದು ಅರ್ಜಿ ವಿಚಾರಣೆಗೆ ಬಂದಿತ್ತು. ಆದರೆ, ಐವರು ನ್ಯಾಯಾಧೀಶರ ಪೀಠ ನಮ್ಮ ಅರ್ಜಿ ವಿಚಾರಣೆ ನಡೆಸಲಿದೆ ಎಂದು ನಿನ್ನೆ ಸಂಜೆ ನಮಗೆ ತಿಳಿಸಲಾಗಿತ್ತು. ಇಂತಹ ಆದೇಶ ಯಾರು ನೀಡಿದ್ದು?, ಆದೇಶದಲ್ಲಿ ಏನಿದೆ? ಎಂದು ಕಪಿಲ್ ಸಿಬಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.