ಗೆಲುವಿನ ಅಂತರ ಹೆಚ್ಚಿಸಲು ಪಣತೊಟ್ಟ ಖಾದರ್‌ರನ್ನು ತಡೆಯುವವರು ಯಾರು?

Update: 2018-05-09 05:26 GMT

ಮಂಗಳೂರು, ಮೇ 8: ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಧಿಕ ಮುಸ್ಲಿಮ್ ಮತದಾರರನ್ನು ಹೊಂದಿರುವ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ರಾಜ್ಯದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ಯು.ಟಿ. ಖಾದರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ತಾನು ಸ್ಪರ್ಧಿಸಿದ ಮೂರು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸುತ್ತಾ ಬಂದ ಯು.ಟಿ.ಖಾದರ್‌ಗೆ ಈ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಖಾದರ್‌ಗೆ ಗೆಲುವು ಮಾತ್ರವಲ್ಲ ತನ್ನ ಗೆಲುವಿನ ಅಂತರವನ್ನು ಹೆಚ್ಚಿ ಸುವ ಗುರಿಯೂ ಇದೆ. ಅದಕ್ಕಾಗಿ ಪಕ್ಷದ ಹಿರಿಯ-ಕಿರಿಯ ಕಾರ್ಯಕರ್ತರು, ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಕಳೆದ ಬಾರಿ 29,111 ಮತಗಳ ಅಂತರದ ಗೆಲುವು ಸಾಧಿಸಿದ್ದರೆ, ಈ ಬಾರಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲೇಬೇಕು ಎಂಬುದು ಖಾದರ್ ಮತ್ತು ಅವರ ಅಭಿಮಾನಿಗಳ ಪಣ.

2013ರಲ್ಲಿ ಯು.ಟಿ. ಖಾದರ್‌ರನ್ನು ಸೋಲಿಸಲೇ ಬೇಕು ಎಂಬ ಇರಾದೆಯಿಂದ ಬಿಜೆಪಿ, ಜೆಡಿಎಸ್, ಬಿಎಸ್ಪಿ, ಎಸ್‌ಡಿಪಿಐ, ಸಿಪಿಎಂ, ಜೆಡಿಯು, ಕೆಜೆಪಿ ಅಭ್ಯರ್ಥಿಗಳಲ್ಲದೆ 8 ಮಂದಿ ಪಕ್ಷೇತರರೂ ಕಣಕ್ಕಿಳಿದಿ ದ್ದರು. ಆದರೆ ಖಾದರ್ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಒಟ್ಟು 5 ಮಂದಿ ಕಣದಲ್ಲಿದ್ದಾರೆ. ಪಕ್ಷೇತರರು ಯಾರೂ ಇಲ್ಲದಿರುವುದು ಗಮನಾರ್ಹ. ಕಳೆದ 2 ದಶಕದಿಂದ ಇಲ್ಲಿ ಮತ ವಿಭಜನೆಯ ತಂತ್ರ ಗಾರಿಕೆ ನಡೆಯುತ್ತಲೇ ಇದೆ. 1994ರ ಹೊರತುಪಡಿಸಿ ಬಳಿಕ ನಡೆದ ಯಾವ ಚುನಾವಣೆಯಲ್ಲೂ ಈ ತಂತ್ರ ಫಲಿಸಲಿಲ್ಲ. ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳು ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕಾಂಗ್ರೆಸ್‌ಗೆ ಈ ಕ್ಷೇತ್ರ ಕಟ್ಟಿಟ್ಟ ಬುತ್ತಿಯಂತಿದೆ. ಅದರಲ್ಲೂ ಸಚಿವ ಯು.ಟಿ.ಖಾದರ್‌ರನ್ನು ಮಣಿಸಲು ಸದ್ಯ ಯಾವ ಅಭ್ಯರ್ಥಿಗೂ ಕಷ್ಟಸಾಧ್ಯ ಎಂಬಂತಹ ವಾತಾವರಣವಿದೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆ ಜೊತೆೆ, ಯು.ಟಿ.ಖಾದರ್‌ರ ವೈಯಕ್ತಿಕ ವರ್ಚಸ್ಸಿನ ಪ್ರಭಾವವೂ ಇದೆ.

ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಪಂ, ಸೋಮೇಶ್ವರ ಪುರಸಭೆ ಯ ಲ್ಲದೆ ಮಂಗಳೂರು ತಾಲೂಕಿನ 10 ಗ್ರಾಪಂ ಹಾಗೂ ಬಂಟ್ವಾಳ ತಾಲೂಕಿನ 10 ಗ್ರಾಪಂಗಳಿವೆ. ಕ್ಷೇತ್ರದ ಪ್ರತಿ ಯೊಂದು ವಾರ್ಡಿನ ಹಾಗೂ ಜನರ ನಾಡಿಮಿಡಿತ ಅರಿತ ಖಾದರ್‌ಗೆ ಅದೇ ಗೆಲುವಿನ ದಾರಿಯಾಗುವ ಸಾಧ್ಯತೆ ಯಿದೆ. ವಿಪಕ್ಷಗಳ ಕಾರ್ಯಕರ್ತರು ಎದುರಾದಾಗಲೂ ಕೂಡ ನಗುಮುಖದಿಂದಲೇ ಮಾತನಾಡುವ ಗುಣ ಖಾದರ್‌ಗೆ ಸಿದ್ಧಿಸಿದೆ. ಕೋಮುಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟ ಈ ಕ್ಷೇತ್ರದಲ್ಲಿ ಖಾದರ್ ಹಿಂದೂಗಳ ಪರ ಎಂದು ಕೆಲವು ಮುಸ್ಲಿಮರೂ, ಖಾದರ್ ಮುಸ್ಲಿಮರ ಎಂದು ಕೆಲವು ಹಿಂದೂಗಳು ಆರೋಪಿಸುತ್ತಿದ್ದಾರೆ. ಆದರೆ, ತಾನು ಕ್ಷೇತ್ರದ ಜನತೆಯ ಪರ ಎಂದು ವಾದಿಸುವ ಖಾದರ್ ಈ ನಿಟ್ಟಿನಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನ್ನ ವಿರುದ್ಧ ಅಪಪ್ರಚಾರ ಮಾಡುವವರ ಬಾಯಿ ಮುಚ್ಚಿ ಸುವ ಕೆಲಸ ಮಾಡುತ್ತಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ಮಾಡಿದಷ್ಟು ತನ್ನ ಮನೋಸ್ಥೈರ್ಯ ಹೆಚ್ಚುತ್ತದೆ ಎಂದು ಖಚಿತ ಧ್ವನಿಯಲ್ಲಿ ಹೇಳುವ ಖಾದರ್, ತನ್ನ ವಿರುದ್ಧ ಕಳೆದ ಐದು ವರ್ಷದಿಂದ ಕೇಳಿ ಬರುತ್ತಿರುವ ಅಪಸ್ವರಗಳನ್ನೆಲ್ಲಾ ಯಾರ ಅರಿವಿಗೂ ಬಾರದಂತೆ ಚಿವುಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಖಾದರ್ ವಿರುದ್ಧ ಕ್ಷೇತ್ರದಲ್ಲಿ ಅಪಸ್ವರವೇ ಇಲ್ಲ ಎಂದಲ್ಲ. ಯು.ಟಿ. ಖಾದರ್ ಗೆದ್ದು ಇಲ್ಲಿ ಏನಾಯಿತು? ಉಳ್ಳಾಲ ದರ್ಗಾದ ಆಡಳಿತಕ್ಕೆ ಸಂಬಂಧಿಸಿ ಗುಂಪುಗಾರಿಕೆ ನಡೆದಾಗ ಖಾದರ್ ಪಕ್ಷಪಾತ ಮಾಡಿದ್ದು ಯಾಕೆ? ಕೋಮುಗಲಭೆ ನಡೆದಾಗ ಖಾದರ್ ಸಂತ್ರಸ್ತ ಮುಸ್ಲಿಮರಿಗೆ ನೆರವು ನೀಡಿಲ್ಲ ಯಾಕೆ? ಪೊಲೀಸರು ಮನೆ ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆಗೈದು ಅಮಾಯಕರನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಹಾಕಿದಾಗ ವೌನವಾಗಿದ್ದೇಕೆ? ಜನರನ್ನು ಹೆದರಿಸಿ, ಬೆದರಿಸಿ ಹಫ್ತಾ ವಸೂಲಿ ಮಾಡುವ, ಗುಂಪು ಕಟ್ಟಿಕೊಂಡು ಅಮಲು ಪದಾರ್ಥ ಸೇವಿಸಿ ಅಮಾಯಕರ ಮೇಲೆ ರೌಡಿಗಳು ದೌರ್ಜನ್ಯ ಮಾಡಿದಾಗಲೂ ಸುಮ್ಮನಿದ್ದುದು ಯಾಕೆ? ಉಳ್ಳಾಲದಲ್ಲಿ ಮಾರಕವಾಗಿ ಹಬ್ಬಿರುವ ಡ್ರಗ್ಸ್, ಮಾದಕ ವಸ್ತುಗಳನ್ನು ಪೂರೈಕೆ ಮಾಡುವ ದಂಧೆಕೋರರನ್ನು ಹದ್ದುಬಸ್ತಿನಲ್ಲಿ ಇಟ್ಟಿಲ್ಲ ಯಾಕೆ? ಮತೀಯ ಗಲಭೆಯ ಸಂದರ್ಭ ಕೊಲೆಯಾದವರ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡಲು ಮೀನಮೇಷ ಮಾಡಿದ್ದು ಯಾಕೆ ಇತ್ಯಾದಿ ಪ್ರಶ್ನೆಯೊಂದಿಗೆ ವಿಪಕ್ಷಗಳು ಸಾಮಾಜಿಕ ಜಾಲ ತಾಣ ಸಹಿತ ಬಹಿರಂಗ ಸಭೆಗಳಲ್ಲಿ ಪ್ರಶ್ನಿಸತೊಡಗಿದ್ದರು.

ಚುನಾವಣೆಯ ದಿನ ಸಮೀಪಿಸುತ್ತಲೇ ಈ ಕಾವನ್ನು ಸಚಿವ ಖಾದರ್ ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾದರ್‌ರ ಪ್ರಚಾರ ಕೂಡ ಬಿರುಸಿನಿಂದ ನಡೆಯು ತ್ತಿದೆ. ಕಾಂಗ್ರೆಸ್ ಸ್ಥಳೀಯ ಮುಖಂಡರು ಒಂದೆಡೆ ಬಹಿ ರಂಗ ಸಭೆ, ಕಾರ್ಯಕರ್ತರ ಸಭೆ, ವಾರ್ಡ್ ಸಭೆ, ಮನೆಮನೆ ಭೇಟಿ ನೀಡುವಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಸೋಶಿಯಲ್ ಮೀಡಿಯಾ ತಂಡ ಕೂಡ ಅತ್ಯಂತ ಸಕ್ರಿಯವಾಗಿದೆ. ಬಿಜೆಪಿಯ ನಡೆ ಬೇರೆ ರೀತಿಯಲ್ಲಿ ಸಾಗುತ್ತಿದೆ. ಅಂದರೆ ಕಾರ್ಯಕರ್ತರ ಸಭೆ, ಮನೆ ಮನೆ ಭೇಟಿಯಲ್ಲದೆ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಕೂಡ ಮುಸ್ಲಿಮರ ಮತಗಳ ಬೇಟೆಗೆ ಇಳಿದಿದ್ದಾರೆ.

ಖಾದರ್‌ರಂತೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ, ಧರ್ಮ ಗುರುಗಳ ಆಶೀರ್ವಾದ ಪಡೆಯುತ್ತಿದ್ದಾರೆ. ಮತಗಳ ವಿಭಜನೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಆದರೆ ಬಿಜೆಪಿ ಅಭ್ಯರ್ಥಿಗೆ ಸೂಕ್ಷ್ಮ ವಿಷಯಗಳನ್ನು ಎಳೆದು ತರುವ ಇರಾದೆ ಇದ್ದಂತಿಲ್ಲ. ಇದು ಕ್ಷೇತ್ರದ ಹಿಂದುತ್ವವಾದಿ ಹಾಗೂ ಪ್ರಖರ ಬಿಜೆಪಿಗರಿಗೆ ಜೀರ್ಣ ವಾದಂತಿಲ್ಲ. ಖಾದರ್‌ರ ಸವಾಲನ್ನು ಸ್ವೀಕರಿಸಿ ಮಂಗಳೂರಿನ ಮಾಜಿ ಮೇಯರ್ ಹಾಗೂ ಮಾಜಿ ಕಾಂಗ್ರೆಸ್ಸಿಗ ಕೆ.ಅಶ್ರಫ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನ ಅತೃಪ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡು ಅಶ್ರಫ್‌ರೊಂದಿಗೆ ಕೈ ಜೋಡಿಸಿದ್ದಾರೆ. ಎಲ್ಲ ರೊಂದಿಗೆ ಕ್ಷೇತ್ರದ ಪ್ರಮುಖ ಸ್ಥಳಗಳಿಗೆ ತೆರಳಿ ಅಶ್ರಫ್ ಪ್ರಚಾರ ನಡೆಸುತ್ತಿದ್ದರೂ ಕೂಡ ಕಾರ್ಯಕರ್ತರ ಕೊರತೆ ಅವರನ್ನು ಕಾಡುತ್ತಿದೆ.

ಸಿಪಿಎಂ ಅಭ್ಯರ್ಥಿ ನಿತಿನ್ ಕುತ್ತಾರ್ ಸಾಂಪ್ರದಾಯಿಕ ಮತಗಳನ್ನು ನೆಚ್ಚಿದ್ದಾರೆ. ಯುವ ವಕೀಲನಿಗೆ ಅವಕಾಶ ನೀಡಿದ್ದರಿಂದ ಕ್ಷೇತ್ರದ ಯುವಕರು ತಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಸಿಪಿಎಂ ಮತಗಳು ಚುನಾವಣೆಯಿಂದ ಚುನಾವಣೆಗೆ ಇಳಿಮುಖಗೊಳ್ಳುತ್ತಿರುವುದು ಗಮನಾರ್ಹ. ಇನ್ನು ಎಂಇಪಿ(ಮಹಿಳಾ ಎಂಪವರ್ಮೆಂಟ್ ಪಾರ್ಟಿ)ಪುರುಷ ಅಭ್ಯರ್ಥಿಗೆ ಮಣೆ ಹಾಕಿದೆ. ಕ್ಷೇತ್ರದ ಹೊರಗಿನ ಈ ಅಭ್ಯರ್ಥಿಯ ಪರಿಚಯ ಸದ್ಯ ಯಾರಿಗೂ ಆಗಿಲ್ಲ. ಎಸ್‌ಡಿಪಿಐ ಪಕ್ಷವು ಈ ಬಾರಿ ಕಣದಲ್ಲಿಲ್ಲ. ಜಾತ್ಯತೀತ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಎಸ್‌ಡಿಪಿಐ ಘೋಷಿ ಸಿದ್ದು, ಹಾಗಾಗಿ ಎಸ್‌ಡಿಪಿಐ ಮತಗಳು ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ಹಂಚಿ ಹೋದರೆ ಅಚ್ಚರಿ ಇಲ್ಲ.

ಕ್ಷೇತ್ರದ ಜನಪ್ರಿಯ ನಾಯಕ ಯು.ಟಿ.ಖಾದರ್

49ರ ಹರೆಯದ ಯು.ಟಿ.ಖಾದರ್ ಕೇವಲ ಕಾಂಗ್ರೆಸ್ ಅಭ್ಯರ್ಥಿ, ಶಾಸಕ, ಸಚಿವ ಮಾತ್ರವಲ್ಲ ಅತ್ಯಂತ ಜನಪ್ರಿಯ ಜನಪ್ರತಿನಿಧಿ ಕೂಡ ಹೌದು. ಮತದಾರರಿಗೆ ಅತ್ಯಂತ ಸುಲಭವಾಗಿ ಕೈಗೆ ಸಿಗುವ ಶಾಸಕ, ಸಚಿವ ಎಂಬ ಹೆಗ್ಗಳಿಕೆ ಅವರದ್ದು. ಅವರ ವಿರುದ್ಧ ಆರೋಪ, ಟೀಕೆಗಳಿಗೆ ಬರವಿಲ್ಲ. ಆದರೆ ಕ್ಷೇತ್ರದ ಮೇಲಿನ ಅವರ ಹಿಡಿತದ ಬಗ್ಗೆ ಅವರ ವಿರೋಧಿಗಳಿಗೂ ಸಂಶಯವಿಲ್ಲ. ಕ್ಷೇತ್ರದ ಅತಿಹೆಚ್ಚು ಮತದಾರರ ನೇರ ಪರಿಚಯ ಇರುವ ಜನಪ್ರತಿನಿಧಿ ಎಂಬುದು ಅವರ ಇನ್ನೊಂದು ವೈಶಿಷ್ಟ. ಕಳೆದ 29 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಖಾದರ್ 11 ವರ್ಷ ಶಾಸಕ ಸ್ಥಾನದೊಂದಿಗೆ 5 ವರ್ಷ ಸಚಿವರಾಗಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ 2 ಪ್ರಮುಖ ಖಾತೆಗಳನ್ನು ನಿಭಾಯಿಸಿ, ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿಯೂ ಗಮನ ಸೆಳೆದಿ ದ್ದಾರೆ. ಆರೋಗ್ಯ ಸಚಿವರಾಗಿದ್ದಾಗ ಹರೀಶ್ ಸಾಂತ್ವನ ಯೋಜನೆ ಸಹಿತ ಜನಪರ ಯೋಜನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು

1. ಯು.ಟಿ.ಖಾದರ್ (ಕಾಂಗ್ರೆಸ್)

2. ಸಂತೋಷ್ ಕುಮಾರ್ ರೈ(ಬಿಜೆಪಿ)

3. ಕೆ.ಅಶ್ರಫ್(ಜೆಡಿಎಸ್)

4. ನಿತಿನ್ ಕುತ್ತಾರ್ (ಸಿಪಿಎಂ)

5. ಉಸ್ಮಾನ್ (ಎಂಇಪಿ)

ಕ್ಷೇತ್ರದ ಮತದಾರರ ಸಂಖ್ಯೆ

ಪುರುಷ ಮತದಾರರು - 96,186

ಮಹಿಳಾ ಮತದಾರರು - 99,536

ಇತರ ಮತದಾರರು - 13

ಒಟ್ಟು ಮತದಾರರು - 1,95,735

-----------------------------------

ಒಟ್ಟು ಮತಗಟ್ಟೆಗಳು - 210

ಮಹಿಳಾ ಸ್ನೇಹಿ ಮತಗಟ್ಟೆಗಳು - 5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News