'ಐಸಿಸ್ ಸೇರಿ' ಎಂಬ ಬರಹವಿರುವ ಉಗ್ರ ಸಂಘಟನೆಯ ಧ್ವಜ ಅಂಟಿಸಿದ ಪ್ರಕರಣ: 6 ಬಿಜೆಪಿ ಸದಸ್ಯರು ಪೊಲೀಸ್ ವಶಕ್ಕೆ

Update: 2018-05-09 12:38 GMT

ಹೊಸದಿಲ್ಲಿ, ಮೇ 9: ಉಗ್ರ ಸಂಘಟನೆ 'ಐಸಿಸ್ ಗೆ ಸೇರಿ' ಎಂದು ಎಂದು ಬರೆಯಲಾದ ಧ್ವಜವೊಂದರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಬಿಜೆಪಿ ಸದಸ್ಯರೆನ್ನಲಾದ ಆರು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಮೇ 7ರ ರಾತ್ರಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ನಲ್ಬರಿ ಜಿಲ್ಲೆಯ ಬೆಲ್ಸೊರ್ ಪ್ರದೇಶದಿಂದ  ಈ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಲ್ಲಿನ ಮರವೊಂದಕ್ಕೆ ಐಸಿಸ್ ಧ್ವಜವನ್ನು ಅಂಟಿಸಿದ ಪ್ರಕರಣದಲ್ಲಿ ಅವರ ಶಾಮೀಲಾತಿಯ ಬಗ್ಗೆ ಶಂಕೆಯಿದೆ. ಪೊಲೀಸರು ವಶಕ್ಕೆ ಪಡೆದುಕೊಂಡ ವ್ಯಕ್ತಿಗಳನ್ನು ತಪನ್ ಬರ್ಮನ್, ಪುಲಕ್ ಬರ್ಮನ್, ದ್ವಿಪ್ ಜ್ಯೋತಿ ಥಾಕುರಿಯ, ಸೊರೊಜ್ಜ್ಯೊತಿ ಬೈಶ್ಯ, ಮೊಜಮಿಲ್ ಅಲಿ ಹಾಗೂ ಮೂನ್ ಅಲಿ ಎಂದು ಗುರುತಿಸಲಾಗಿದೆ.

ಅವರಲ್ಲಿ ಬರ್ಮನ್ ಎಂಬಾತ ಮಾಜಿ ಕಾಂಗ್ರೆಸ್ ಕೌನ್ಸಿಲರ್ ಆಗಿದ್ದು, ನಂತರ ಬಿಜೆಪಿಗೆ  ಪಕ್ಷಾಂತರಗೊಂಡು ಅದರ ಜಿಲ್ಲಾ ಸಮಿತಿ ಸದಸ್ಯನಾಗಿದ್ದಾನೆ. ಐಸಿಸ್ ಸೇರಿ ಎಂಬ ಸಂದೇಶವನ್ನು ಅರಬಿಕ್ ಭಾಷೆಯಲ್ಲಿ ಬರೆದಿದ್ದ ಧ್ವಜವನ್ನು ಕೊಯಿಹಟ ಎಂಬಲ್ಲಿನ ಭತ್ತದ ಗದ್ದೆಯಲ್ಲಿನ ಮರವೊಂದಕ್ಕೆ ಅಂಟಿಸಲಾಗಿರುವುದರನ್ನು ಗ್ರಾಮಸ್ಥರು ಮೇ 3ರಂದು ಗಮನಿಸಿದ್ದರು. ಕೂಡಲೇ ಬೆಲ್ಸೋರ್ ಪೊಲೀಸರಿಗೆ ಗ್ರಾಮಸ್ಥರು ಸುದ್ದಿ ಮುಟ್ಟಿಸಿದ್ದು, ಅವರು ಸ್ಥಳಕ್ಕೆ ಬಂದು ಧ್ವಜವನ್ನು  ವಶಕ್ಕೆ ಪಡೆದುಕೊಂಡಿದ್ದರು. ಮೇ 2ರಂದು ಐಎಸ್‍ಐಎಸ್ ಎನ್‍ಇ ಎಂದು ಬರೆಯಲಾದ ಆರು ಧ್ವಜಗಳು ಗೋಲಪುರ ಜಿಲ್ಲೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣವೂ ಸಾಕಷ್ಟು ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News