ದೇಶಾದ್ಯಂತದ ಬಗ್ಗೆ ಮಾತನಾಡುವ ಮೊದಲು ದಿಲ್ಲಿಯಲ್ಲಿ ಯೋಜನೆ ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ
ಹೊಸದಿಲ್ಲಿ, ಮೇ 10: ವಿಪರೀತ ವಾಯುಮಾಲಿನ್ಯದ ಕಾರಣ ಜನತೆ ಕಷ್ಟಪಡುತ್ತಿರುವುದರಿಂದ ರಾಷ್ಟ್ರೀಯ ಶುದ್ಧಗಾಳಿ ಕಾರ್ಯಕ್ರಮವನ್ನು ಮೊತ್ತಮೊದಲು ದಿಲ್ಲಿಯಲ್ಲಿ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿದೆ.
ನೀವು ಹಲವು ಯೋಜನೆಗಳನ್ನು ರೂಪಿಸಿದ್ದೀರಿ. ಆದರೆ ಅವನ್ನು ಅನುಷ್ಠಾನಗೊಳಿಸಲು ಆಗುತ್ತಿಲ್ಲ. ದಿಲ್ಲಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ, ಆದರೆ ದೇಶದಾದ್ಯಂತ ಜಾರಿಗೊಳಿಸುವ ಮಾತನಾಡುತ್ತೀರಿ. ಕನಿಷ್ಟ ಪಕ್ಷ ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಾದರೂ ಮೊದಲು ಜಾರಿಗೊಳಿಸಿ ಎಂದು ಮದನ್ ಬಿ.ಲೋಕೂರ್ ಹಾಗೂ ದೀಪಕ್ ಗುಪ್ತ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ದಿಲ್ಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್)ದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಕಳವಳ ಸೂಚಿಸಿ 1985ರಲ್ಲಿ ಪರಿಸರವಾದಿ ಎಂ.ಸಿ.ಮೆಹ್ತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠವು, ಕೋಕ್( ಇಂಧನವಾಗಿ ಬಳಸಲಾಗುವ ಕಲ್ಲಿದ್ದಲಿನ ಸಾರ)ನ ಆಮದಿಗೆ ನಿಷೇಧ ಹೇರುವ ಕುರಿತು ಈ ವರ್ಷದ ಜೂನ್ 30ರೊಳಗೆ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಸಮಗ್ರ ಕ್ರಿಯಾ ಯೋಜನೆಯ ಒಂದು ಭಾಗವನ್ನು ಈಗಾಗಲೇ ದಿಲ್ಲಿ- ಎನ್‌ಸಿಆರ್ ವಲಯದಲ್ಲಿ ಅನುಷ್ಟಾನಗೊಳಿಸಲಾಗಿದೆ ಎಂದು ಪರಿಸರ, ಅರಣ್ಯ ಮತ್ತು ಪರಿಸರ ಖಾತೆಯನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಎನ್‌ಎಸ್ ನಾಡಕರ್ಣಿ ನ್ಯಾಯಪೀಠಕ್ಕೆ ತಿಳಿಸಿದರು.
ಆದರೆ ವಾಯುಮಾಲಿನ್ಯ ಸಮಸ್ಯೆ ನಿವಾರಣೆಯ ಉದ್ದೇಶದ ಕಾರ್ಯಕ್ರಮಗಳನ್ನು ಕೇವಲ ಪ್ರಕಟಿಸಿದರೆ ಸಾಲದು, ಇವು ಸೂಕ್ತವಾಗಿ ಜಾರಿಯಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈಗೆ ಮುಂದೂಡಿತು.