ಆಧಾರ್: ತೀರ್ಪು ಕಾಯ್ದಿರಿಸಿದ ಸುಪ್ರೀಂ

Update: 2018-05-10 16:23 GMT

ಹೊಸದಿಲ್ಲಿ ಮೇ 10: ಆಧಾರ್ ಕಾರ್ಡ್‌ನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ 27 ದೂರುಗಳ ಗುಚ್ಛವನ್ನು ಕಳೆದ ಸುಮಾರು 4 ತಿಂಗಳಿಂದ ವಿಚಾರಣೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟ್ ಜುಲೈ ಅಥವಾ ಆಗಸ್ಟ್‌ನಲ್ಲಿ ‘ಉತ್ತಮ ತೀರ್ಪು’ ನೀಡುವ ನಿರೀಕ್ಷೆ ಇದೆ ಎಂದು ದೂರುದಾರರ ಪರ ನ್ಯಾಯವಾದಿ ಉದಯಾದಿತ್ಯ ಬೆನರ್ಜಿ ತಿಳಿಸಿದ್ದಾರೆ. ತಮ್ಮ ವಾದವನ್ನು ಮಂಡಿಸಲು ಲಿಖಿತ ಹೇಳಿಕೆ ದಾಖಲಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಏವರು ಸದಸ್ಯರ ಪೀಠ ಎಲ್ಲ ದೂರುದಾರರಿಗೆ ನಿರ್ದೇಶಿಸಿತು. ನಾಲ್ಕು ತಿಂಗಳುಗಳಲ್ಲಿ 38 ದಿನ ಮ್ಯಾರಥಾನ್ ವಿಚಾರಣೆ ನಡೆಸಿದ ಬಳಿಕ ತೀರ್ಪನ್ನು ಪೀಠ ಕಾಯ್ದಿರಿಸಿತು. 1.2 ಶತಕೋಟಿ ಭಾರತೀಯರಿಗೆ ನೀಡಲಾದ 12 ಅಂಕೆಯ ವಿಶಿಷ್ಟ ಗುರುತಿನ ಚೀಟಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಮೂಲಭೂತ ಹಕ್ಕುಗಳಲ್ಲಿ ಉಲ್ಲೇಖಿಸಿದ ಖಾಸಗಿ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬ ಪ್ರತಿಪಾದನೆಯನ್ನು ಪೀಠ ಪರಿಶೀಲನೆ ನಡೆಸಿತ್ತು. ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಸೆಲ್‌ಪೋನ್ ಸೇವೆ, ಪಾಸ್‌ಪೋರ್ಟ್ ಹಾಗೂ ಡೈವಿಂಗ್ ಲೈಸೆನ್ಸ್ ಸೇರಿದಂತೆ ವಿವಿಧ ಸೇವೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಕಡ್ಡಾಯ ಎಂದು ಸರಕಾರ ಹೇಳಿತ್ತು. ಬೆರಳಚ್ಚು ಹಾಗೂ ಕಣ್ಣ ಪಾಪೆ ಸ್ಕಾನ್ ಒಳಗೊಂಡ ಭಾರೀ ಬಯೋಮೆಟ್ರಿಕ್ ದತ್ತಾಂಶ -ಆಧಾರ್ ಅನ್ನು ಕಡ್ಡಾಯ ಮಾಡಬಾರದು ಎಂದು ದೂರುದಾರರು ವಾದಿಸಿದ್ದರು.

ದತ್ತಾಂಶ ಸೋರಿಕೆಯಾಗುವ ಸಾಧ್ಯತೆ ಇದೆ. ಆದುದರಿಂದ ಆಧಾರ್ ರದ್ದುಗೊಳಿಸಬೇಕು ಎಂದು ಪ್ರತಿಪಾದಿಸಿದ್ದರು. ಆದರೆ, ಕೇಂದ್ರ ಸರಕಾರ ಆಧಾರ್ ಅನ್ನು ವಿವಿಧ ನೆಲೆಯಲ್ಲಿ ಸಮರ್ಥಿಸಿಕೊಂಡಿತ್ತು. ಅಸಂಖ್ಯಾತ ಜನರಿಗೆ ಸೌಲಭ್ಯಗಳನ್ನು ಹಂಚಲು ಹಾಗೂ ನಿಧಿ ಬೇರೆಡೆ ವರ್ಗಾವಣೆಯಾಗುವುದನ್ನು ತಡೆಯಲು ಆಧಾರ್‌ನಿಂದ ಸಾಧ್ಯ ಎಂದು ಹೇಳಿತ್ತು. ಆಧಾರ್ ದತ್ತಾಂಶ ಸುರಕ್ಷಿತವಾಗಿದೆ. ಸೋರಿಕೆಯಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹಾಗೂ ವಿಶಿಷ್ಟ ಗುರುತು ಪ್ರಾಧಿಕಾರ ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News