ಮಕ್ಕಳಿಗೆ ಚಾಕಲೇಟ್ ನೀಡಿದ ಮಹಿಳೆಯನ್ನು ಥಳಿಸಿ ಕೊಂದರು!

Update: 2018-05-10 17:04 GMT
ಸಾಂದರ್ಭಿಕ ಚಿತ್ರ

ತಿರುವನಮೆಲೈ, ಮೇ 10: ಮಕ್ಕಳ ಸಾಗಾಟಗಾರರು ಎಂಬ ಶಂಕೆಯಿಂದ ಗ್ರಾಮಸ್ಥರು ಓರ್ವ ಮಹಿಳೆಯನ್ನು ಥಳಿಸಿ ಹತ್ಯೆಗೈದ, ಅವರ ಸಂಬಂಧಿಕರು ಹಾಗೂ ಮತ್ತೋರ್ವನಿಗೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಿರುವನಮಲೈಯಲ್ಲಿ ಬುಧವಾರ ಸಂಭವಿಸಿದೆ.

ಇದನ್ನು ಯಾರು ಮಾಡಿದರು ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳನ್ನು ಗುರುತಿಸಲು ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 65 ವರ್ಷದ ಮಹಿಳೆ ತನ್ನ ಇಬ್ಬರು ಸಂಬಂಧಿಕರು ಹಾಗೂ ಚಾಲಕನೊಂದಿಗೆ ಈ ಗ್ರಾಮದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಲು ಚೆನ್ನೈಯಿಂದ ಆಗಮಿಸಿದ್ದರು. ಈ ದೇವಾಲಯ ಮಹಿಳೆಯ ಕುಟುಂಬದ ಆರಾಧನ ಸ್ಥಳ. ಸುಮಾರು 10.30ರ ಹೊತ್ತಿಗೆ ಗುಂಪು ದೇವಾಲಯವನ್ನು ವೀಕ್ಷಿಸುತ್ತಿರುವ ಸಂದರ್ಭ ಮಹಿಳೆ ಅದೇ ಪ್ರದೇಶದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ಚಾಕಲೇಟು ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಅದನ್ನು ಗಮನಿಸಿದ ಕೆಲವು ಸ್ಥಳೀಯ ಜನರು ಮಹಿಳೆ ಮಕ್ಕಳನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಕೂಡಲೇ ಮಕ್ಕಳ ಅಪಹರಣಕಾರರು ಇದ್ದಾರೆ ಎಂಬ ಸಂದೇಶ ವ್ಯಾಟ್ಸ್ ಆ್ಯಪ್‌ಗಳಲ್ಲಿ ಹರಡಿತ್ತು. ಜನರು ಅವರನ್ನು ತರಾಟೆಗೆ ತೆಗೆದುಕೊಂಡರು. ಆದರೆ, ಅವರು ಜನರಿಂದ ಹೇಗೋ ತಪ್ಪಿಸಿಕೊಂಡು ತೆರಳಿದರು. ಆದರೆ, ಅರ್ಧ ಕಿ.ಮೀ. ತೆರಳಿದಾಗ ಗುಂಪೊಂದು ಕಾರನ್ನು ತಡೆದು ನಿಲ್ಲಿಸಿತು ಹಾಗೂ ಅವರನ್ನು ಕಾರಿನಿಂದ ಹೊರಗೆಳೆದು ಥಳಿಸಿತು. ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳನ್ನು ಅಪಹರಿಸುವ ಅಥವಾ ಸಾಗಾಟ ಮಾಡುವ ಬಗ್ಗೆ ಜಿಲ್ಲೆಯಲ್ಲಿ ಯಾರೊಬ್ಬರು ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News