ಜಿನ್ನಾ 'ಮಹಾಪುರುಷ' ಎಂದ ಬಿಜೆಪಿ ಸಂಸದೆ

Update: 2018-05-11 06:23 GMT

ಲಕ್ನೋ, ಮೇ 11: ಭಾರತದಲ್ಲಿ ಮುಹಮ್ಮದ್ ಆಲಿ ಜಿನ್ನಾಗೆ ಗೌರವ ನೀಡಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರೂ ಅವರದ್ದೇ ಪಕ್ಷದ ಸಂಸದೆ, ಬಹ್ರೈಚ್ ಕ್ಷೇತ್ರವನ್ನು ಪ್ರತಿನಿಧಿಸುವ ಸಾವಿತ್ರಿ ಭಾಯಿ ಫುಲೆ ಜಿನ್ನಾರನ್ನು 'ಮಹಾಪುರುಷ' ಎಂದು ಬಣ್ಣಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾಲೂ ಇದೆ ಎಂದಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಜಿನ್ನಾರನ್ನು ಮಹಾಪುರುಷ ಎಂದು ಈಗಾಗಲೇ ಬಣ್ಣಿಸಿ ವಿವಾದಕ್ಕೀಡಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಗುರುವಾರ ರಾತ್ರಿ ಸುದ್ದಿಗಾರರೊಡನೆ ಮಾತನಾಡಿದ ಫುಲೆ "ಜಿನ್ನಾ ಯಾವತ್ತೂ ಮಹಾಪುರುಷರೆಂದು ಪರಿಗಣಿಸಲ್ಪಡುತ್ತಾರೆ'' ಎಂದು ಹೇಳಿದ್ದಾರೆ.

ಇದಕ್ಕೂ ಮುಂಚೆ ಮೌರ್ಯ ತಮ್ಮ ಹೇಳಿಕೆಯಲ್ಲಿ ``ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದ್ದ ಮಹಾಪುರುಷರತ್ತ ಜನರು ಬೊಟ್ಟು ಮಾಡಿ ತೋರಿಸಿದರೆ ಅದು ನಾಚಿಕೆಗೇಡು, ಜಿನ್ನಾ ಕೂಡ ದೇಶ ವಿಭಜನೆಯ ಮುನ್ನ ದೇಶಕ್ಕಾಗಿ ಸೇವೆಗೈದಿದ್ದಾರೆ'' ಎಂದಿದ್ದರು.

ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಜಿನ್ನಾ ಭಾವಚಿತ್ರ ವಿವಾದದ ಹಿನ್ನೆಲೆಯಲ್ಲಿ ಫುಲೆ ಅವರ ಹೇಳಿಕೆ ಬಂದಿದೆ. ಫುಲೆ ಅವರು ಈ ಹಿಂದೆ ಕೇಂದ್ರ ಸರಕಾರ ದಲಿತರನ್ನು ಕಾಣುತ್ತಿರುವ ರೀತಿಯನ್ನು ಖಂಡಿಸಿದ್ದರಲ್ಲದೆ  ಬಿಜೆಪಿ ನಾಯಕರ ದಲಿತ ನಿವಾಸ ಭೇಟಿ ಜನರಿಗೆ ಅವಮಾನವೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News