ಠಾಗೋರ್ ನೋಬೆಲ್ ಪ್ರಶಸ್ತಿ ವಾಪಸ್ ನೀಡಿದ್ದರು ಎಂದ ಬಿಪ್ಲಬ್ ದೇಬ್

Update: 2018-05-11 06:42 GMT

ಅಗರ್ತಲಾ, ಮೇ 11: ಅಧಿಕಾರಕ್ಕೆ ಬಂದಂದಿನಿಂದ ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ವಿವಾದ ಸೃಷ್ಟಿಸುತ್ತಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಇದೀಗ ಇನ್ನೊಂದು ವಿವಾದವನ್ನು ಹುಟ್ಟು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ 46 ವರ್ಷದ ದೇಬ್ ನೆರೆದಿದ್ದ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ, "ಬ್ರಿಟಿಷರನ್ನು ವಿರೋಧಿಸಿ ರವೀಂದ್ರನಾಥ ಠಾಗೋರ್ ತಮ್ಮ ನೋಬೆಲ್ ಪ್ರಶಸ್ತಿ ವಾಪಸ್ ನೀಡಿದ್ದರು'' ಎಂದು ಹೇಳಿದ್ದಾರೆ. ಉದಯಪುರದಲ್ಲಿ ಠಾಗೋರ್ ಜನ್ಮದಿನೋತ್ಸವ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ಮೇಲಿನಂತೆ ನುಡಿದಿದ್ದಾರೆ.

ವಾಸ್ತವವಾಗಿ ಠಾಗೋರ್ ಅವರು 1913ರಲ್ಲಿ ನೋಬಲ್ ಪ್ರಶಸ್ತಿ ಪಡೆದಿದ್ದರು. 1919ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ವಿರೋಧಿಸಿ ಅವರು ನಿರಾಕರಿಸಿದ್ದು ನೈಟ್ ಹುಡ್ ಅನ್ನು ಆಗಿತ್ತು.

ದೇಬ್ ಅವರ ಹೇಳಿಕೆಗಳು ಬಿಜೆಪಿಗೆ ಮುಜುಗರ ಸೃಷ್ಟಿಸಿವೆ ಎಂಬುದು ಸುಳ್ಳಲ್ಲ. ಮಹಾಭಾರತ ಕಾಲದಲ್ಲೂ ಇಂಟರ್ನೆಟ್ ಇತ್ತು ಎಂದು ಕಳೆದ ತಿಂಗಳು ಹೇಳಿದ್ದ ದೇಬ್ ನಂತರ ಡಯಾನಾ ಹೇಡನ್ ಗೆ 1997ರಲ್ಲಿ ಮಿಸ್ ವರ್ಲ್ಡ್ ಕಿರೀಟ ದೊರಕಿದ್ದನ್ನು ಪ್ರಶ್ನಿಸಿ, "ಆಕೆ ಐಶ್ವರ್ಯಾ ರೈಯಂತೆ ಭಾರತೀಯ ಸುಂದರಿಯಲ್ಲ'' ಎಂದಿದ್ದರು. ನಂತರ ತಮ್ಮ ಈ ಹೇಳಿಕೆಗೆ ಅವರು ಕ್ಷಮೆ ಕೋರಿದ್ದರು.

ಇಷ್ಟಕ್ಕೂ ನಿಲ್ಲಿಸದ ಅವರು ಅಗರ್ತಲದಲ್ಲಿ ಮಾತನಾಡುತ್ತಾ ಮೆಕ್ಯಾನಿಕಲ್ ಇಂಜಿನಿಯರುಗಳು ಸಿವಿಲ್ ಸರ್ವಿಸಸ್ ಸೇರಬಾರದು. ಕೇವಲ ಸಿವಿಲ್ ಇಂಜಿನಿಯರುಗಳು ಮಾತ್ರ ಸೇರಬೇಕು ಎಂದು ಹೇಳಿ  ವಿವಾದಕ್ಕೀಡಾಗಿದ್ದರು. ಕೆಲ ವಾರಗಳ ಹಿಂದೆ ಇನ್ನೊಂದು ವಿವಾದ ಸೃಷ್ಟಿಸಿದ್ದ ಅವರು ಪದವೀಧರರು ಸರಕಾರಿ ಉದ್ಯೋಗದ ಬೆನ್ನು ಹತ್ತದೆ ಪಾನ್ ಅಂಗಡಿ ತೆರೆಯಬೇಕು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News