ಅಮಿತ್ ಶಾ ಬೆಂಗಾವಲು ಪಡೆಗೆ ತಡೆಯೊಡ್ಡಿದ ಟಿಡಿಪಿ ಕಾರ್ಯಕರ್ತರು, ಕಾರಿಗೆ ಹಾನಿ
ಹೈದರಾಬಾದ್, ಮೇ 11: ಚಿತ್ತೂರು ಜಿಲ್ಲೆಯ ತಿರುಮಲ ಸಮೀಪ ಹಾದು ಹೋಗುತ್ತಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಂಗಾವಲು ಪಡೆಯ ಕಾರೊಂದರ ವಿಂಡ್ ಶೀಲ್ಡ್ ಅನ್ನು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಮುಂದಿರಿಸಿ ಪ್ರತಿಭಟಿಸುತ್ತಿದ್ದ ತೆಲುಗು ದೇಶಂ ಪಕ್ಷದ ಸದಸ್ಯರು ಮುರಿದಿದ್ದಾರೆ. ಟಿಡಿಪಿ ಹಾಗೂ ತೆಲುಗುದೇಶಂ ಕಾರ್ಯಕರ್ತರ ನಡುವೆ ಸಂಘರ್ಷವೂ ನಡೆದಿದೆ.
ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಿ, ಶುಕ್ರವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಶಾ ಹೊರ ಬರುತ್ತಿದ್ದಂತೆಯೇ ಸರತಿಯಲ್ಲಿ ನಿಂತಿದ್ದ ಭಕ್ತಾದಿಗಳು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದ್ದರಲ್ಲದೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನೂ ಇರಿಸಿದ್ದಾರೆ.
ತಿರುಪತಿಯಿಂದ ಹಿಂದಿರುಗುತ್ತಿದ್ದ ಹಾದಿಯಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಹಾಗೂ ಟಿಡಿಪಿ ಧ್ವಜಗಳನ್ನು ಕೈಗಳಲ್ಲಿ ಹಿಡಿದಿದ್ದ ಟಿಡಿಪಿ ಕಾರ್ಯಕರ್ತರು ಶಾ ಬೆಂಗಾವಲು ಪಡೆಯನ್ನು ಅಲಿಪಿರಿ ಚೆಕ್ ಪೋಸ್ಟ್ ಸಮೀಪ ತಡೆದಿದ್ದರು. 'ಅಮಿತ್ ಶಾ ಗೋ ಬ್ಯಾಕ್, ವಿ ವಾಂಟ್ ಜಸ್ಟಿಸ್' ಘೋಷಣೆಗಳೂ ಮೊಳಗಿದ್ದವು.
ಇದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಎರಡೂ ಪಕ್ಷಗಳ ಸದಸ್ಯರು ಸಂಘರ್ಷಕ್ಕಿಳಿದಿದ್ದರು. ಟಿಡಿಪಿ ಕಾರ್ಯಕರ್ತನೊಬ್ಬ ಕಲ್ಲು ತೂರಾಟ ನಡೆಸಿದಾಗ ಬೆಂಗಾವಲು ಪಡೆಯ ವಾಹನವೊಂದಕ್ಕೆ ಹಾನಿಯಾಯಿತು. ಕೊನೆಗೆ ಪೊಲೀಸರು ಗುಂಪನ್ನು ಚದುರಿಸಿ ಕೆಲ ಟಿಡಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.