ಈ ಗ್ರಾಮದಲ್ಲಿ ಕಳೆದ 400 ವರ್ಷಗಳಲ್ಲಿ ಮಕ್ಕಳೇ ಜನಿಸಿಲ್ಲ!
ರಾಜಗಢ(ಮ.ಪ್ರ.),ಮೇ 11: ರಾಜಧಾನಿ ಭೋಪಾಲದಿಂದ 130 ಕಿ.ಮೀ.ದೂರದಲ್ಲಿರುವ ರಾಜಗಢ ಜಿಲ್ಲೆಯ ಸಂಕಾ ಶ್ಯಾಮಜಿ ಗ್ರಾಮದಲ್ಲಿ ಕಳೆದ 400 ವರ್ಷಗಳಲ್ಲಿ ಮಕ್ಕಳ ಜನನವಾಗಿಲ್ಲ. ತಮ್ಮ ಗ್ರಾಮವು ‘ಶಾಪಗ್ರಸ್ತ’ವಾಗಿದೆ ಮತ್ತು ಇಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದರೆ ತಾಯಿ ಅಥವಾ ಮಗುವಿನ ಸಾವು ಸಂಭವಿಸುತ್ತದೆ ಇಲ್ಲವೇ ಮಗು ವಿರೂಪಗೊಂಡಿರುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಈ ಗ್ರಾಮದಲ್ಲಿ ಮಹಿಳೆಯರ ಹೆರಿಗೆ ನಡೆಯಬಾರದು ಎಂಬ ಲಿಖಿತ ನಿಯಮಗಳಿಲ್ಲವಾದರೂ,ಅವರು ಇಲ್ಲಿ ಮಕ್ಕಳಿಗೆ ಜನ್ಮ ನೀಡಲು ಅವಕಾಶವಿಲ್ಲ. ತಾನು ಮತ್ತು ತನ್ನ ಮಗು ಕ್ಷೇಮವಾಗಿರಬೇಕೆಂದು ಗರ್ಭಿಣಿ ಬಯಸಿದರೆ ಆಕೆ ಗ್ರಾಮದ ಹೊರಗೆ ತೆರಳಿ ಅಲ್ಲಿ ಹೆರಿಗೆಗಾಗಿಯೇ ನಿರ್ಮಿಸಿರುವ ಪ್ರತ್ಯೇಕ ಕೋಣೆಯಲ್ಲಿ ಮಗುವಿಗೆ ಜನನ ನೀಡಬೇಕಾಗಿದೆ.
ಶೇ.90ರಷ್ಟು ಹೆರಿಗೆಗಳು ಆಸ್ಪತ್ರೆಗಳಲ್ಲಿಯೇ ನಡೆಯುತ್ತವೆ. ತುರ್ತುಸ್ಥಿತಿಗಳಲ್ಲಿ ಮಹಿಳೆಯರನ್ನು ಗ್ರಾಮದ ಹೊರಗೆ ಕರೆದೊಯ್ಯಲಾಗುತ್ತದೆ. ಪ್ರತಿಕೂಲ ಹವಾಮಾನವಿದ್ದರೂ ಹೆರಿಗೆಗಾಗಿ ಮಹಿಳೆಯರನ್ನು ಗ್ರಾಮದಿಂದ ಹೊರಗೆ ಸಾಗಿಸಲಾಗುತ್ತದೆ ಎಂದು ಗ್ರಾಮದ ಮುಖ್ಯಸ್ಥರಾದ ನರೇಂದ್ರ ಗುಜ್ಜರ್ ಸುದ್ದಿಗಾರರಿಗೆ ತಿಳಿಸಿದರು.
16ನೇ ಶತಮಾನದಲ್ಲಿ ಈ ಗ್ರಾಮದಲ್ಲಿ ಮಂದಿರ ನಿರ್ಮಾಣಗೊಳ್ಳುತ್ತಿದ್ದಾಗ ಮಹಿಳೆಯೋರ್ವಳು ಗೋಧಿಯನ್ನು ಬೀಸಲು ಆರಂಭಿಸಿದ್ದಳು. ಇದು ನಿರ್ಮಾಣ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡಿತ್ತು ಮತ್ತು ಕ್ರುದ್ಧಗೊಂಡ ದೇವತೆಗಳು ಈ ಗ್ರಾಮದಲ್ಲಿ ಯಾವುದೇ ಮಹಿಳೆ ಮಗುವಿಗೆ ಜನ್ಮ ನೀಡುವುದು ಸಾಧ್ಯವಾಗದಿರಲಿ ಎಂದು ಶಾಪ ನೀಡಿದ್ದರು ಎನ್ನುತ್ತಾರೆ ಗ್ರಾಮದ ಹಿರಿಯರು.
ಇದೊಂದು ಮೂಢನಂಬಿಕೆ ಎನ್ನುವುದನ್ನು ಗ್ರಾಮಸ್ಥರು ತಳ್ಳಿಹಾಕಿದರು. ಆಕಸ್ಮಿಕವಾಗಿ ಗ್ರಾಮದಲ್ಲಿ ಕೆಲವು ಹೆರಿಗೆಗಳು ನಡೆದಾಗ ಮಗು ವಿರೂಪಗೊಂಡಿದ್ದು ಅಥವಾ ಸಾವನ್ನಪ್ಪಿದ್ದನ್ನು ತಾವು ನೋಡಿದ್ದೇವೆ ಎಂದು ಅವರು ಹೇಳಿದರು.
ಗ್ರಾಮದಲ್ಲಿ ಯಾರೂ ಮದ್ಯಪಾನ ಮಾಡುವುದಿಲ್ಲ ಅಥವಾ ಮಾಂಸ ಸೇವಿಸುವುದಿಲ್ಲ. ಇದು ಗ್ರಾಮಕ್ಕೆ ದೇವರ ಆಶೀರ್ವಾದವಾಗಿದೆ ಎಂದು ಹಿರಿಯ ವ್ಯಕ್ತಿಯೋರ್ವರು ತಿಳಿಸಿದರು.