ಜೈಲಿನೊಳಗೆ ಕೈದಿಗಳೇ ನಿರ್ವಹಿಸುವ ರೇಡಿಯೊ ಸ್ಟೇಶನ್: ಮಹಾರಾಷ್ಟ್ರದಲ್ಲೊಂದು ವಿನೂತನ ಪ್ರಯತ್ನ
ಅಹಮದ್‌ನಗರ, ಮೇ.11: ಕೈದಿಗಳನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಮಹಾರಾಷ್ಟ್ರದ ಅಹಮದ್‌ನಗರ ಕಾರಾಗೃಹದ ಅಧಿಕಾರಿಗಳು ವಿನೂತನ ಪ್ರಯೋಗವೊಂದನ್ನು ನಡೆಸುತ್ತಿದ್ದು, ಕೈದಿಗಳೇ ನಿರ್ವಹಿಸುವ ರೇಡಿಯೊ ಸ್ಟೇಶನ್‌ವೊಂದನ್ನು ನಿರ್ಮಿಸಿದ್ದಾರೆ.
ಈ ಪ್ರಯೋಗದಿಂದ ಕೈದಿಗಳ ಪುನರ್ವಸತಿ ಮತ್ತು ಸುಧಾರಣಾ ಪ್ರಕ್ರಿಯೆಗೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಈ ರೇಡಿಯೊದಲ್ಲಿ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು, ಆಧ್ಯಾತ್ಮಿಕ ಚರ್ಚೆಗಳ ಜೊತೆಗೆ ಕೈದಿಗಳು ಮನವಿ ಮಾಡುವ ಹಾಡುಗಳನ್ನೂ ಹಾಕಲಾಗುವುದು ಎಂದು ಜೈಲ್ ವರಿಷ್ಠಾಧಿಕಾರಿ ಎನ್.ಜೆ ಸಾವಂತ್ ತಿಳಿಸಿದ್ದಾರೆ.
ರೇಡಿಯೊ ಪ್ರಸಾರವು ಎಲ್ಲ ಕೈದಿಗಳನ್ನು ತಲುಪುವುದನ್ನು ಖಚಿತಪಡಿಸುವ ಸಲುವಾಗಿ ಪ್ರತಿ ಕೋಣೆಯಲ್ಲೂ ವಿಶೇಷ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಈ ಪ್ರಯತ್ನದ ಮೂಲಕ ಕೈದಿಗಳ ಮನಸ್ಸನ್ನು ನಕಾರಾತ್ಮಕ ವಿಷಯಗಳಿಂದ ಸಕಾರಾತ್ಮಕ ಚಿಂತನೆಯತ್ತ ಪರಿವರ್ತಿಸುವ ಯತ್ನ ಮಾಡಲಾಗುತ್ತಿದೆ ಎಂದು ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಕೈದಿಗಳು ಘನತೆಯಿಂದ ಬದುಕಲು ಮತ್ತು ಅವರ ಪುನರ್ವಸತಿಗಾಗಿ ಭಾರತದಾದ್ಯಂತ ಜೈಲುಗಳಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
5000 ಕೈದಿಗಳ ಸಾಮರ್ಥ್ಯ ಹೊಂದಿರುವ ರಾಜ್ಯದ ಅತೀದೊಡ್ಡ ಕಾರಾಗೃಹವಾಗಿರುವ ಪುಣೆಯ ಯೆರವಡ ಜೈಲಿನ ಕೈದಿಗಳು ತಮ್ಮ ಸಮಯವನ್ನು ಇನ್ಮೇಟ್ ಎಂಬ ತಮ್ಮದೇ ಬ್ರಾಂಡ್‌ನ ಚರ್ಮದ ಪಾದರಕ್ಷೆಗಳನ್ನು ತಯಾರಿಸಲು ಬಳಸುತ್ತಾರೆ. ಇವರು ತಯಾರಿಸುವ ಪಾದರಕ್ಷೆಗಳನ್ನು ದೇಶಾದ್ಯಂತ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಗುಡ್ಗಾಂವ್ ಜೈಲಿನಲ ಕೈದಿಗಳು ತಮ್ಮ ಕೌಶಲ್ಯ ಮತ್ತು ಸಮಯವನ್ನು ಬಟ್ಟೆಯ ಚೀಲಗಳನ್ನು ತಯಾರಿಸಲು ಬಳಸುವ ಮೂಲಕ ಪಾಲಿಥಿನ್ ನಿರಾಕರಿಸಿ, ಬಟ್ಟೆಯ ಚೀಲಗಳನ್ನು ಬಳಸಿ ಎಂಬ ಅಭಿಯಾನದಡಿ ಪರಿಸರ ರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.