ಐಪಿಎಲ್ ಸ್ಪಾಟ್ ಫಿಕ್ಸಿಂಗ್ ತನಿಖೆ ನಡೆಸಿದ್ದ ಮುಂಬೈಯ ಪೊಲೀಸ್ ಅಧಿಕಾರಿ ಆತ್ಮಹತ್ಯೆ
ಮುಂಬೈ, ಮೇ.11: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಕರಣಗಳ ತನಿಖೆ ನಡೆಸಿದ್ದ ಮುಂಬೈ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಹಿಮಾಂಶು ರಾಯ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆಯ ಮಾಜಿ ಮುಖ್ಯಸ್ಥರಾಗಿರುವ ಹಿಮಾಂಶು ರಾಯ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರಾಯ್ ಶುಕ್ರವಾರದಂದು ಮಧ್ಯಾಹ್ನ 1.40ರ ಸುಮಾರಿಗೆ ಮುಂಬೈಯ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 54ರ ಹರೆಯದ ರಾಯ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ದೀರ್ಘ ಕಾಲದ ವೈದ್ಯಕೀಯ ರಜೆಯಲ್ಲಿ ತೆರಳಿದ್ದರು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಪಲ್ಲವಿ ಪುರ್ಕಯಸ್ತ ಹತ್ಯೆ ಹಾಗೂ ಜೆ.ಡೆ ಹತ್ಯೆ ಪ್ರಕರಣ ಸೇರಿದಂತೆ ರಾಯ್ ಹಲವು ಪ್ರತಿಷ್ಠಿತ ಪ್ರಕರಣಗಳ ತನಿಖೆಯ ನೇತೃತ್ವವಹಿಸಿದ್ದರು. ಅವರು ಭಯೋತ್ಪಾದನಾ ನಿಗ್ರಹದಳದ ಮುಂದಾಳತ್ವ ವಹಿಸಿದ್ದ ಸಂದರ್ಭದಲ್ಲಿ ಅಮೆರಿಕನ್ ಶಾಲೆಯನ್ನು ಸ್ಫೋಟಿಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಅನೀಸ್ ಅನ್ಸಾರಿಯನ್ನು ಬಂಧಿಸಿದ್ದರು.