×
Ad

ಶ್ರೀದೇವಿ ಸಾವು ತನಿಖೆ ಕೋರಿದ ಅರ್ಜಿ ತಿರಸ್ಕೃತ

Update: 2018-05-11 21:29 IST

ಹೊಸದಿಲ್ಲಿ, ಮೇ 11: ಫೆಬ್ರವರಿಯಲ್ಲಿ ನಡೆದ ನಟಿ ಶ್ರೀದೇವಿ ಸಾವಿನ ಕುರಿತು ತನಿಖೆಗೆ ಕೋರಿ ಸಲ್ಲಿಸಲಾಗಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ನಾವು ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ದೂರುದಾರ ಚಿತ್ರನಿರ್ಮಾಪಕರಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತಿಳಿಸಿದ್ದಾರೆ. ದಿಲ್ಲಿ ಉಚ್ಚ ನ್ಯಾಯಾಲಯದಿಂದ ಮನವಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸುನೀಲ್ ಸಿಂಗ್ ಸುಪ್ರೀಂ ಕೋರ್ಟ್ ಸಂಪರ್ಕಿಸಿದ್ದರು. ಶ್ರೀದೇವಿ ದುಬೈಯ ಹೊಟೇಲ್ ಐಷಾರಾಮಿ ಕೊಠಡಿಯಲ್ಲಿ ಫೆಬ್ರವರಿ 24ರಂದು ಬಾತ್‌ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು.

 ಅವರು ಬಾತ್‌ಟಬ್‌ನಲ್ಲಿ ಮುಳುಗಿ ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದ್ದಾರೆ ಎಂದು ದುಬೈಯ ವಿಧಿವಿಜ್ಞಾನ ಪರೀಕ್ಷೆಯ ವರದಿ ತಿಳಿಸಿತ್ತು. ದೂರುದಾರರ ಪರ ವಕೀಲ ವಿಕಾಸ್ ಸಿಂಗ್, ಓಮನ್‌ನಲ್ಲಿ ಶ್ರೀದೇವಿ ಹೆಸರಿನಲ್ಲಿ 240 ಕೋಟಿ ರೂಪಾಯಿಯ ಜೀವ ವಿಮೆ ಇತ್ತು. ಅವರು ಯುಎಇಯಲ್ಲಿ ಮೃತಪಟ್ಟರೆ ಮಾತ್ರ ಆ ಹಣ ಬಿಡುಗಡೆಯಾಗಲು ಸಾಧ್ಯ ಎಂದು ವಾದಿಸಿದ್ದರು. ‘‘ಇದೇ ವಿಚಾರಕ್ಕೆ ಸಂಬಂಧಿಸಿದ ಎರಡು ದೂರುಗಳನ್ನು ನಾವು ಈಗಾಗಲೇ ತಿರಸ್ಕರಿಸಿದ್ದೇವೆ. ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News