ಮಹಾರಾಷ್ಟ್ರ: ಹಾಲಿಗೆ ಸಬ್ಸಿಡಿ ಹೆಚ್ಚಿಸಲು ಸರಕಾರಕ್ಕೆ ಮನವಿ
ಪುಣೆ, ಮೇ 11: ಮಹಾರಾಷ್ಟ್ರದಲ್ಲಿ ಹೊರಗಿನ ರಾಜ್ಯದ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಎದುರಾಗಿರುವ ತೀವ್ರ ಪೈಪೋಟಿಯನ್ನು ಎದುರಿಸಲು ಸ್ಥಳೀಯ ಹೈನುಗಾರರು ಹಾಲಿನ ಬೆಲೆ ಇಳಿಸುವುದೂ ಸೇರಿದಂತೆ ಹಲವು ಸಾಧ್ಯತೆಗಳನ್ನು ಪರಿಶೀಲಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳ(ಕೆಎಂಎಫ್‌ನ ನಂದಿನಿ, ಗುಜರಾತ್‌ನ ಅಮುಲ್ ಉತ್ಪನ್ನಗಳು) ಮಾರಾಟಕ್ಕೆ ನಿರ್ಬಂಧ ವಿಧಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿರುವ ಯಾವುದೇ ಡೈರಿಗಳು (ಹಾಲು ಉತ್ಪಾದನಾ ಕೇಂದ್ರಗಳು) ಹಾಲಿಗೆ ಸರಕಾರ ಘೋಷಿಸಿರುವ ಲೀಟರ್‌ಗೆ 27 ರೂ. ದರವನ್ನು ನೀಡುತ್ತಿಲ್ಲ. ಹೈನುಗಾರರಿಗೆ ಈಗ ಲೀಟರ್‌ಗೆ 17 ರೂ.ನಿಂದ 25 ರೂ.ವರೆಗೆ ಹಣ ದೊರೆಯುತ್ತಿದೆ. ಕೆನೆ ತೆಗೆದ ಹಾಲಿನ ಪುಡಿ ಉತ್ಪಾದನೆಗೆ ಪ್ರತೀ ಲೀಟರ್‌ಗೆ 3 ರೂ. ಸಹಾಯಧನವನ್ನು ಸರಕಾರ ಘೋಷಿಸಿದೆ. ಸರಕಾರ ಘೋಷಿಸಿದ ದರವನ್ನು ಹೈನುಗಾರರಿಗೆ ನೀಡಲು ವಿಫಲವಾಗಿರುವ ಆಡಳಿತ ಮಂಡಳಿಯನ್ನು ಯಾಕೆ ವಜಾಗೊಳಿಸಬಾರದು ಎಂದು ಪ್ರಶ್ನಿಸಿ ರಾಜ್ಯದಲ್ಲಿರುವ ಎಲ್ಲಾ 23 ಸಹಕಾರಿ ಒಕ್ಕೂಟಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಸ್ಥಳೀಯ ಹಾಲಿನ ಉತ್ಪನ್ನಗಳಿಗೆ ಹೊರ ರಾಜ್ಯದ ಹಾಲಿನ ಉತ್ಪನ್ನಗಳಿಂದ ಎದುರಾಗಿರುವ ತೀವ್ರ ಪೈಪೋಟಿಯ ಬಗ್ಗೆ ಚರ್ಚಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ , ಕರ್ನಾಟಕ ಸರಕಾರ ಹೈನುಗಾರರಿಗೆ ಪ್ರತೀ ಲೀಟರ್‌ಗೆ 5 ರೂ. ಸಬ್ಸಿಡಿ ನೀಡುತ್ತಿರುವುದನ್ನು ಪ್ರಸ್ತಾವಿಸಲಾಯಿತು. ಇದೇ ಮಾದರಿಯನ್ನು ಮಹಾರಾಷ್ಟ್ರದಲ್ಲೂ ಅನುಸರಿಸಬೇಕೆಂದು ಒತ್ತಾಯಿಸಲಾಯಿತು. ಹಾಲಿನ ಪುಡಿಯ ಉತ್ಪಾದನಾ ವೆಚ್ಚ ಪ್ರತೀ ಕಿ.ಗ್ರಾಂ.ಗೆ 200 ರೂ. ಆಗಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ದರ ಪ್ರತೀ ಕಿ.ಗ್ರಾಂ.ಗೆ 116 ರೂ. ಆಗಿದೆ. ಆದರೂ ಸರಕಾರ ನೀಡುವ ಪ್ರತೀ ಲೀಟರ್‌ಗೆ 5 ರೂ. ಸಬ್ಸಿಡಿಯ ಕಾರಣ ಕೆಎಂಎಫ್ ನಂದಿನಿ ಹಾಲಿನಿಂದ ಉತ್ಪಾದಿಸಲಾದ ಹಾಲಿನ ಪುಡಿಯನ್ನು ಯಾವುದೇ ಸಮಸ್ಯೆಯಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ಹಾಲಿನ ಪುಡಿಯನ್ನು ಮಾರಾಟ ಮಾಡುವುದೇ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ಹೈನುಗಾರರು ಕಳವಳ ವ್ಯಕ್ತಪಡಿಸಿದರು. ಮಹಾರಾಷ್ಟ್ರದಲ್ಲಿ ಪ್ರತೀ ದಿನ 30 ಲಕ್ಷ ಲೀಟರ್‌ನಷ್ಟು ಅಮುಲ್ ಹಾಗೂ ನಂದಿನಿ ಹಾಲು ಮಾರಾಟವಾಗುತ್ತಿದೆ. ಇದರಲ್ಲಿ ಅಮುಲ್‌ನ ಪಾಲು ಸುಮಾರು 21 ಲಕ್ಷ ಲೀಟರ್‌ನಷ್ಟಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಿನಾಯಕರಾವ್ ಪಾಟೀಲ್ ತಿಳಿಸಿದ್ದಾರೆ. ಮಹಾರಾಷ್ಟ್ರ ಸರಕಾರ ಘೋಷಿಸಿರುವ ಸಬ್ಸಿಡಿ ಅಸ್ಪಷ್ಟವಾಗಿದೆ. ಹಾಲಿನ ಪುಡಿ ಉತ್ಪಾದನೆಗೆ ಸಬ್ಸಿಡಿ ನೀಡುವ ಬದಲು ನೇರವಾಗಿ ಹೈನುಗಾರರಿಗೇ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿರುವ ಅವರು, ಈ ಕುರಿತು ಹೈನುಗಾರಿಕೆ ಅಭಿವೃದ್ಧಿ ಆಯುಕ್ತರೊಂದಿಗೆ ಮೇ 18ರಂದು ಸಭೆ ನಡೆಸಲಾಗುವುದು .ಅಲ್ಲದೆ ಹಾಲಿನ ಮಾರಾಟ ದರವನ್ನು ಕಡಿಮೆಮಾಡಲು ಸಾಧ್ಯವೇ ಎಂಬುದನ್ನು ಅಧ್ಯಯನ ನಡೆಸಲು ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ ಎಂದವರು ತಿಳಿಸಿದ್ದಾರೆ. ಹೈನುಗಾರಿಕೆ ಕ್ಷೇತ್ರವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೇ 12ರಂದು ಕೇಂದ್ರದ ಮಾಜಿ ಕೃಷಿ ಸಚಿವ ಶರದ್ ಪವಾರ್‌ರನ್ನು ಭೇಟಿಯಾಗಲು ಡೈರಿ ಒಕ್ಕೂಟಗಳು ನಿರ್ಧರಿಸಿವೆ. ಸಮಸ್ಯೆಗೆ ಸಮಗ್ರ ಪರಿಹಾರ ಸೂತ್ರ ರೂಪಿಸುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಳಿಗೆ ತೆರಳುವ ನಿಯೋಗದ ನೇತೃತ್ವ ವಹಿಸುವಂತೆ ಪವಾರ್‌ರನ್ನು ವಿನಂತಿಸಲಾಗುವುದು. ಇದು ಕಾರ್ಯಗತವಾಗದಿದ್ದರೆ ಸುಪ್ರೀಂಕೋರ್ಟ್‌ನ ಮೊರೆ ಹೋಗಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.