ಬಾಲಕಿಯ ಅತ್ಯಾಚಾರಗೈದು ಜೀವಂತ ದಹಿಸಿದ ದುಷ್ಕರ್ಮಿ
ಸಾಗರ,ಮೇ 11: ಮಧ್ಯಪ್ರದೇಶದ ಸಾಗರ ಜಿಲ್ಲೆಯ ಖುರಾಯಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜುಜಾರಪುರ ಗ್ರಾಮದಲ್ಲಿ ಗುರುವಾರ ಸಂಜೆ 16 ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಯೊಬ್ಬ ಆಕೆಯ ಜೀವಂತ ದಹಿಸಿದ ಘಟನೆ ನಡೆದಿದೆ. ಕಾಂಗ್ರೆಸ್ ಪಕ್ಷವು ಈ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಅಶ್ಲೀಲ ಚಿತ್ರಗಳು ಮತ್ತು ವಿಕೃತ ಕಾಮ ಇಂತಹ ಘಟನೆಗಳಿಗೆ ಕಾರಣ ಎಂದು ಖುರಾಯಿ ಶಾಸಕರೂ ಆಗಿರುವ ರಾಜ್ಯದ ಗೃಹಸಚಿವ ಭೂಪೇಂದ್ರ ಸಿಂಗ್ ಅವರು ದೂರಿದರು.
ಇದೊಂದು ಕ್ರೂರ ಘಟನೆ ಎಂದು ಬಣ್ಣಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ ಅವರು,ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ರಾಷ್ಟ್ರ ರಾಜಕಾರಣ ಮತ್ತು ಕರ್ನಾಟಕ ಚುನಾವಣೆಯಲ್ಲಿ ವ್ಯಸ್ತರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೊಂದು ಅಮಾಯಕ ಜೀವವು ಅತ್ಯಾಚಾರಕ್ಕೆ ಬಲಿಯಾಗಿದೆ. ಇಂತಹ ಘಟನೆಗಳು ರಾಜ್ಯಕ್ಕೆ ನಾಚಿಕೆಗೇಡು ಆಗಿವೆ ಎಂದು ಅವರು ಟ್ವೀಟಿಸಿದ್ದಾರೆ.
ಬಾಲಕಿಯ ಹೆತ್ತವರು ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬಂಡ್ರಿ ಗ್ರಾಮಕ್ಕೆ ತೆರಳಿದ್ದು,ತಮ್ಮ ಹೊರಗೆ ಆಟವಾಡುತ್ತಿದ್ದ. ಹೀಗಾಗಿ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದಳು. ಈ ಸಂದರ್ಭ ಒಳಗೆ ನುಗ್ಗಿದ ಗ್ರಾಮದ ನಿವಾಸಿಯೇ ಆದ ರವಿ ಚಾಧರ್(28) ಎಂಬಾತ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತನ್ನ ತಂದೆಗೆ ಈ ವಿಷಯವನ್ನು ತಿಳಿಸುವುದಾಗಿ ಆಕೆ ಬೆದರಿಕೆಯೊಡ್ಡಿದಾಗ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನಗೊಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಕಮಲ ಸಿಂಗ್ ಠಾಕೂರ್ ತಿಳಿಸಿದರು. ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,ಆರೋಪಿಯನ್ನು ಬಂಧಿಸಲಾಗಿದೆ ಎಂದರು.