ಪತ್ರಕರ್ತ ಉಪೇಂದ್ರ ರೈ ವಿರುದ್ಧ ಇಡಿಯಿಂದ ಪ್ರಕರಣ ದಾಖಲು
Update: 2018-05-11 21:39 IST
ಹೊಸದಿಲ್ಲಿ, ಮೇ 11: ಪತ್ರಕರ್ತ ಉಪೇಂದ್ರ ರೈ ಹಾಗೂ ಅವರ ಸಹವರ್ತಿಗಳ ವಿರುದ್ಧ ಹಣ ಕಳ್ಳ ಸಾಗಾಟ ಪ್ರಕರಣ ದಾಖಲಿಸಿರುವ ಜಾರಿ ನಿರ್ದೇಶನಾಲಯ ದಿಲ್ಲಿ ಹಾಗೂ ನೋಯ್ಡದಲ್ಲಿ ಅವರಿಗೆ ಸೇರಿರುವ ವಿವಿಧ ಕಟ್ಟಡಗಳ ಮೇಲೆ ದಾಳಿ ನಡೆಸಿದೆ.
ಹಫ್ತಾ ವಸೂಲಿ ಹಾಗೂ ಮುಂಬೈ ಉದ್ಯಮಿಯೋರ್ವರ ವಿರುದ್ಧ ತೆರಿಗೆ ಇಲಾಖೆ ದಾಖಲಿಸಿದ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ ಆರೋಪದಲ್ಲಿ ಸಿಬಿಐ ಬಂಧಿಸಿದ ಬಳಿಕ ರೈ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೈ ಹಾಗೂ ಇತರರ ವಿರುದ್ಧ ಹಣ ಕಳ್ಳ ಸಾಗಾಟ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಸಿಬಿಐ ದಾಖಲಿಸಿದ ಎರಡು ಪ್ರಥಮ ಮಾಹಿತಿ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿರುವ ಗ್ರೇಟರ್ ಕೈಲಾಸ್-1 ಹಾಗೂ ಸಮೀಪದ ನೋಯ್ಡಾದಲ್ಲಿರುವ ರೈ ಅವರಿಗೆ ಸೇರಿದ ವಿವಿಧ ಕಟ್ಟಡದ ಮೇಲೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.