ಕಾಜಿಗೆ ಅಂತರ್‌ರಾಷ್ಟ್ರೀಯ ಮನ್ನಣೆ

Update: 2018-05-12 13:45 GMT

ಯೋಗರಾಜ್ ಭಟ್ ನಿರ್ದೇಶನದ ವಾಸ್ತುಪ್ರಕಾರದಲ್ಲಿ ನಟಿಸಿದ್ದ ಐಶಾನಿ ಶೆಟ್ಟಿ, ಕನ್ನಡಿಗರು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ಆಕೆ ನಿರ್ದೇಶಿಸಿದ ಕಿರುಚಿತ್ರ ‘ಕಾಜಿ’, ಈಗ ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆದ ಕಿರು ಚಿತ್ರೋತ್ಸವದಲ್ಲಿ ಕಾಜಿ ಪ್ರದರ್ಶಿತವಾಗಿದ್ದು, ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದೆ. ಇದರ ಜೊತೆಗೆ ಮುಂಬೈನಲ್ಲಿ ನಡೆದ ಪ್ರತಿಷ್ಠಿತ 8ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲೂ ಕಾಜಿ ಪ್ರದರ್ಶನಗೊಂಡಿದೆ. ಜೊತೆಗೆ ಈ ಕಿರುಚಿತ್ರದ ಛಾಯಾಗ್ರಾಹಕ ಪ್ರೀತಮ್ ತಗ್ಗಿನಮನೆ ಅವರಿಗೆ ಅತ್ಯುತ್ತಮ ಸಿನೆಮಾಟೋಗ್ರಾಫರ್ ಪ್ರಶಸ್ತಿಯೂ ದೊರೆತಿದೆ.

ಈ ಎರಡೂ ಚಿತ್ರೋತ್ಸವಗಳಲ್ಲಿ ಕಾಜಿಗೆ ಅಪಾರ ಜನಮೆಚ್ಚುಗೆ ದೊರೆತಿರುವುದು ಐಶಾನಿಗೆ ಇನ್ನಿಲ್ಲದ ಖುಷಿ ತಂದಿದೆ. ದಾದಾಫಾಲ್ಕೆ ಅಕಾಡಮಿ ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡಿರುವುದರಿಂದ ನಾವು ರೋಮಾಂಚಿತರಾಗಿದ್ದೇವೆ. ಪ್ರಶಸ್ತಿಯೊಂದನ್ನು ಕೂಡಾ ಗೆದ್ದಿರುವುದು ಚಿತ್ರತಂಡದ ಸಂತಸವನ್ನು ಇಮ್ಮಡಿಗೊಳಿಸಿದೆಯೆಂದು ಆಕೆ ಹೇಳುತ್ತಾರೆ. ಅಂದಹಾಗೆ ಐಶಾನಿ ಕಾಜಿ ಚಿತ್ರವನ್ನು ನಿರ್ದೇಶಿಸಿದ್ದೇ ಒಂದು ಆಕಸ್ಮಿಕವಂತೆ. ವಾಸ್ತುಪ್ರಕಾರ ಹಾಗೂ ರಾಕೆಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಬಳಿಕ,ಆಕೆ ಪದವಿಶಿಕ್ಷಣ ಪೂರ್ಣಗೊಳಿಸಲು ತುಸು ಬ್ರೇಕ್ ಪಡೆದುಕೊಂಡಿದ್ದರಂತೆ. ಸಾಮೂಹಿಕ ಸಂವಹನ ವಿಭಾಗದ ವಿದ್ಯಾರ್ಥಿನಿಯಾದ ಆಕೆಗೆ ಈ ಸಂದರ್ಭದಲ್ಲಿ ಚಿತ್ರನಿರ್ದೇಶನದ ಆಸಕ್ತಿ ಮೂಡಿತ್ತು.

ತಾಯಿ ಮತ್ತು ಪುಟ್ಟ ಬಾಲಕನ ನಡುವಿನ ಭಾವನಾತ್ಮಕ ಬಾಂಧವ್ಯದ ಸಣ್ಣಕಥೆಯೊಂದನ್ನು ಆಕೆ ನೀನಾಸಂ ಸತೀಶ್ ಅವರಿಗೆ ವಿವರಿಸಿದ್ದರು. ಕೂಡಲೇ ತನ್ನ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಆ ಚಿತ್ರವನ್ನು ನಿರ್ಮಿಸುವ ಆಸಕ್ತಿ ತೋರಿಸಿದರು ಹಾಗೂ ಆ ಕಿರುಚಿತ್ರವನ್ನು ನಿರ್ದೇಶಿಸುವಂತೆಯೇ ಐಶಾನಿಗೆ ತಿಳಿಸಿದರು. ಅಲ್ಲದೆ ಕಥೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡುವಂತೆ ಸಲಹೆ ನೀಡಿದರು. ಹೀಗೆ ಅತ್ಯುತ್ತಮ ತಂತ್ರಜ್ಞರು, ತಾರೆಯರ ಸಹಕಾರದೊಂದಿಗೆ ಕಾಜಿ ಉತ್ತಮವಾಗಿ ಮೂಡಿಬಂದಿದೆಯೆಂದು ಐಶಾನಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ಚಿತ್ರದ ನಾಯಕಿಯಾಗಿ ಹಿತ ಚಂದ್ರಶೇಖರ್ ನಟಿಸಿದ್ದರೆ, ಬಾಲಕಲಾವಿದರಾಗಿ ಮಧುರ ಚನ್ನಿಗ ಹಾಗೂ ಇಂಚರ ನಟಿಸಿದ್ದರೆ, ಒಂದು ಮೊಟ್ಟೆಯ ಕಥೆ ಖ್ಯಾತಿಯ ಮಿಥುನ್ ಮುಕುಂದ್ ಸಂಗೀತ ನೀಡಿದ್ದಾರೆ.

ತಾನು ಪ್ರಶಸ್ತಿ ಗೆಲ್ಲುವ ದೃಷ್ಟಿಯಿಂದ ಈ ಚಿತ್ರವನ್ನು ನಿರ್ಮಿಸಿಲ್ಲ ಕೇವಲ ಒಂದು ಉತ್ತಮ ಕಿರುಚಿತ್ರವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಅದಾಗಿತ್ತೆಂದು ಐಶಾನಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News