ಭಾರತ-ಚೀನಾ ಸಮರದ ಕಥೆ ಹೇಳಲಿದೆ ‘ಪಾಲ್ತಾನ್’

Update: 2018-05-12 15:42 GMT

‘ಬಾರ್ಡರ್’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ವಾರ್ ಚಿತ್ರಗಳಿಗೆ ಹೊಸ ತಳಹದಿ ಹಾಕಿಕೊಟ್ಟಿದ್ದ ಜೆ.ಪಿ.ದತ್ತಾ ಇದೀಗ ಮತ್ತೊಂದು ಯುದ್ಧದ ಹಿನ್ನೆಲೆಯ ಚಿತ್ರವೊಂದನ್ನು ಈ ವರ್ಷ ತೆರೆಗೆ ತರಲು ಸಜ್ಜಾಗಿದ್ದಾರೆ. ಹೌದು. ಭಾರತ-ಚೀನಾ ಯುದ್ಧದ ಹಿನ್ನೆಲೆಯ ಕಥಾವಸ್ತುವನ್ನು ಹೊಂದಿರುವ ಪಾಲ್ತನ್ ಸೆಪ್ಟಂಬರ್ 7ರಂದು ಬಿಡುಗಡೆಯಾಗಲಿದೆ. ಚಿತ್ರದ ಟೀಸರ್ ವೀಡಿಯೊ ಈಗಾಗಲೇ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಅದರಲ್ಲಿ ಯೋಧನೊಬ್ಬ ಯುದ್ಧಕ್ಕೆ ಸಿದ್ಧನಾಗುತ್ತಿರುವ ಹಾಗೂ ಭಾರತೀಯ ಸೈನಿಕರು ಹಿಮಾಚ್ಛಾದಿತ ಪರ್ವತ ಕಣಿವೆಯಲ್ಲಿ ಮುನ್ನಡೆಯುತ್ತಿರುವ ರೋಮಾಂಚಕಾರಿ ದೃಶ್ಯಗಳನ್ನು ತೋರಿಸಲಾಗಿದೆ.

ಜೆ.ಪಿ.ದತ್ತಾ ನಿರ್ದೇಶನದ ಬಾರ್ಡರ್ ಚಿತ್ರವು 1971ರಲ್ಲಿ ನಡೆದ ಭಾರತ-ಪಾಕ್ ಸಮರದ ಕಥೆ ಹೇಳಿದರೆ, ಅವರ ಇನ್ನೊಂದು ಚಿತ್ರ ಎಲ್‌ಓಸಿ:ಕಾರ್ಗಿಲ್, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಕಥಾನಕವನ್ನು ಒಳಗೊಂಡಿತ್ತು. ಪಾಲ್ತಾನ್ ಚಿತ್ರದಲ್ಲಿ ಜೆ.ಪಿ.ದತ್ತಾ ಅವರು, 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತೀಯ ಯೋಧರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಭಾರತಕ್ಕೆ ಗೆಲುವು ಸಾಧ್ಯವಾಗದೆ ಇರಲು ಕಾರಣವಾದ ಅಂಶಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಜೆ.ಪಿ.ದತ್ತಾ ಚಿತ್ರಗಳು ಸಾಮಾನ್ಯವಾಗಿ ಮಲ್ಟಿಸ್ಟಾರ್ ಆಗಿರುತ್ತವೆ. ಇದೀಗ ದತ್ತಾ, ಪಾಲ್ತಾನ್‌ನಲ್ಲಿಯೂ ಈ ಸಂಪ್ರದಾಯ ಮುಂದುವರಿಸಿದ್ದಾರೆ. ಸೋನು ಸೂದ್, ಅರ್ಜುನ್ ರಾಮ್‌ಪಾಲ್, ಗುರ್ಮಿತ್ ಚೌಧರಿ ಸೇರಿದಂತೆ ಜನಪ್ರಿಯ ತಾರೆಯರ ದಂಡೇ ಈ ಚಿತ್ರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News