ಪ್ಯಾರೀಸ್‌ನಲ್ಲಿ ಉಗ್ರರ ದಾಳಿ: ಇಬ್ಬರು ಬಲಿ

Update: 2018-05-13 04:05 GMT

ಪ್ಯಾರೀಸ್, ಮೇ 13: ಚಾಕುವಿನಿಂದ ಇರಿದು ಒಬ್ಬನನ್ನು ಹತ್ಯೆ ಮಾಡಿ ಇತರ ನಾಲ್ಕು ಮಂದಿಯನ್ನು ಗಾಯಗೊಳಿಸಿದ ಆರೋಪಿಯನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಇದೊಂದು ಉಗ್ರರ ಕೃತ್ಯ ಎಂದು ಹೇಳಲಾಗಿದೆ.

ಬಾರ್, ರೆಸ್ಟೋರೆಂಟ್ ಮತ್ತು ಥಿಯೇಟರ್‌ಗಳಿಂತ ತುಂಬಿರುವ ಪ್ರದೇಶದಲ್ಲಿ ಪ್ರಮುಖ ಒಪೇರಾ ಹೌಸ್ ಬಳಿ ಈ ದಾಳಿ ನಡೆದಿದೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮಾಕ್ರೋನ್ "ಫ್ರಾನ್ಸ್ ಮತ್ತೆ ರಕ್ತದ ಬೆಲೆ ತೆತ್ತಿದೆ" ಎಂದು ಹೇಳಿದ್ದಾರೆ.

''ದೇವರು ಸರ್ವಶ್ರೇಷ್ಠ'' ಎಂಬ ಘೋಷಣೆ ಕೂಗಿದ ವ್ಯಕ್ತಿ ದಾಳಿ ಆರಂಭಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಯೋತ್ಪಾದಕ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ದಾಳಿಯನ್ನು ತನ್ನ ಕಾರ್ಯಕರ್ತರು ನಡೆಸಿದ್ದಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೇಳಿಕೊಂಡಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಐದು ಮಂದಿಯ ಮೇಲೆ ಚಾಕುವಿನಿಂದ ದಾಳಿ ನಡೆದಿದ್ದು, ಒಬ್ಬ ಸ್ಥಳದಲ್ಲೇ ಅಸು ನೀಗಿದ್ದಾರೆ. ಉಳಿದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News