×
Ad

ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳನ್ನು ತುಂಬುವುದು ಮಾನವಹಕ್ಕುಗಳ ಉಲ್ಲಂಘನೆ: ಸುಪ್ರೀಂ

Update: 2018-05-13 19:07 IST

ಹೊಸದಿಲ್ಲಿ, ಮೇ.13: ದೇಶಾದ್ಯಂತದ ಜೈಲುಗಳಲ್ಲಿ ಲೆಕ್ಕಕ್ಕಿಂತ ಅಧಿಕ ಕೈದಿಗಳನ್ನು ಹಾಕುತ್ತಿರುವ ಕುರಿತು ಕಾಳಜಿ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ ಇದರಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುವುದರಿಂದ ಎಲ್ಲ ಉಚ್ಚ ನ್ಯಾಯಾಲಯಗಳು ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದೆ. ಈ ವಿಷಯದ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುವಂತೆ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳಿಗೆ ಮನವಿ ಮಾಡಿದ ಶ್ರೇಷ್ಟ ನ್ಯಾಯಾಲಯ ನ್ಯಾಯಾಲಯದ ವಿಶೇಷ ಸಲಹೆಗಾರರು ನೀಡಿದ ಪತ್ರವನ್ನು ಉಲ್ಲೇಖಿಸಿದ್ದಾರೆ.

ಈ ಪತ್ರದಿಂದ ತಿಳಿದುಬರುವ ಅಂಶವೆಂದರೆ ಜೈಲಧಿಕಾರಿಗಳು ಕಾರಾಗೃಹದಲ್ಲಿ ಲೆಕ್ಕಕ್ಕಿಂತ ಅಧಿಕ ಕೈದಿಗಳನ್ನು ತುಂಬುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆಲವು ಕಡೆಗಳಲ್ಲಿ ಜೈಲಿನ ಸಾಮರ್ಥ್ಯದ ಶೇ.100 ಮತ್ತು ಶೇ.150ರ ಪ್ರಮಾಣವನ್ನೂ ದಾಟಿರುವುದು ಕಂಡುಬಂದಿದೆ ಎಂದು ನ್ಯಾಯಾಧೀಶ ಮದನ್ ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠ ತಿಳಿಸಿದೆ. ನಮ್ಮ ಅಭಿಪ್ರಾಯದ ಪ್ರಕಾರ, ಪ್ರತಿ ಉಚ್ಚ ನ್ಯಾಯಾಲಯ ಕೂಡಾ ಈ ವಿಷಯವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರ/ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಸಹಾಯದೊಂದಿಗೆ ಕೈಗೆತ್ತಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಜೈಲುಗಳಲ್ಲಿ ಸಿಬ್ಬಂದಿ ಕೊರತೆಯ ವಿಚಾರವನ್ನೂ ಪ್ರಸ್ತಾಪಿಸಿದ ನ್ಯಾಯಾಲಯ ಪೀಠ, ಪ್ರಾಧಿಕಾರವಾಗಲಿ ಅಥವಾ ರಾಜ್ಯ ಸರಕಾರಗಳಾಗಲೀ ಜೈಲುಗಳಲ್ಲಿ ಸಿಬ್ಬಂದಿಯನ್ನು ನೇಮಿಸುವ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News