ವಿಮಾನ ನಿಲ್ದಾಣಗಳ ಸರಕು ನಿರ್ವಹಣೆ ವಿಭಾಗಗಳಲ್ಲಿ ಸುರಕ್ಷತಾ ಯೋಜನೆ ರೂಪಿಸಲು ಸಮಿತಿ ರಚನೆ
ಹೊಸದಿಲ್ಲಿ,ಮೆ 13: ವಿಮಾನ ನಿಲ್ದಾಣಗಳ ಸರಕು ನಿರ್ವಹಣೆ ವಿಭಾಗಗಳಿಗೆ ಭಯೋತ್ಪಾದನೆ ಬೆದರಿಕೆಗಳ ವಿರುದ್ಧ ಸುರಕ್ಷತೆಯನ್ನು ಹೆಚ್ಚಿಸಲು ಮಾರ್ಗೋಪಾಯಗಳನ್ನು ಸೂಚಿಸಲು ವಿಶೇಷ ಸಮಿತಿಯೊಂದನ್ನು ಕೇಂದ್ರ ಗೃಹ ಸಚಿವಾಲಯವು ರಚಿಸಿದೆ. ಇಂತಹ ಬೆದರಿಕೆಗಳು ಪ್ರಯಾಣಿಕರ ಟರ್ಮಿನಲ್‌ಗಳ ಸುರಕ್ಷತೆಯ ಮೇಲೂ ಪರಿಣಾಮ ಬೀರುವುದರಿಂದ ಸರಕಾರವು ಈ ಕ್ರಮವನ್ನು ಕೈಗೊಂಡಿದೆ.
ಸಮಿತಿಯು ಯಾವುದೇ ಭದ್ರತಾ ವ್ಯವಸ್ಥೆಯಿಲ್ಲದ ಸರಕು ನಿರ್ವಹಣೆ ವಿಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳು ಮತ್ತು ಭಯೋತ್ಪಾದನೆ ವಿರುದ್ಧ ಸುರಕ್ಷತಾ ಯೋಜನೆಯನ್ನು ರೂಪಿಸಲಿದೆ ಮತ್ತು ಈಗಾಗಲೇ ಸಿಐಎಸ್‌ಎಫ್ ಭದ್ರತೆಯನ್ನು ಹೊಂದಿರುವ ಇಂತಹ ವಿಭಾಗಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಹೆಚ್ಚಿಸಲು ಕ್ರಮಗಳನ್ನು ಸೂಚಿಸಲಿದೆ.
ಗೃಹ ಸಚಿವಾಲಯ,ಸಿಐಎಸ್‌ಎಫ್,ನಾಗರಿಕ ವಾಯುಯಾನ ಸುರಕ್ಷತಾ ಘಟಕ,ಗುಪ್ತಚರ ಸಂಸ್ಥೆ(ಐಬಿ) ಮತ್ತು ಇತರ ಕೆಲವು ಸರಕು ನಿರ್ವಹಣೆ ಏಜೆನ್ಸಿಗಳ ಪ್ರತಿನಿಧಿಗಳು ಈ ಸಮಿತಿಯಲ್ಲಿರುತ್ತಾರೆ.
ಸದ್ಯ ಬೆಂಗಳೂರು,ದಿಲ್ಲಿ,ಮುಂಬೈ ಸೇರಿದಂತೆ ದೇಶದ ಪ್ರಮುಖ ಒಂಭತ್ತು ವಿಮಾನ ನಿಲ್ದಾಣಗಳಲ್ಲಿಯ ಸರಕು ನಿರ್ವಹಣೆ ವಿಭಾಗಗಳು ಸಿಐಎಸ್‌ಎಫ್ ರಕ್ಷಣೆಯನ್ನು ಹೊಂದಿದ್ದು,ಇತರ 28 ಪ್ರಮುಖ ನಿಲ್ದಾಣಗಳಲ್ಲಿಯ ಸರಕು ನಿರ್ವಹಣೆ ವಿಭಾಗಗಳ ಸುರಕ್ಷತೆಯನ್ನು ಖಾಸಗಿ ಭದ್ರತಾ ಸಿಬ್ಬಂದಿಗಳು ನೋಡಿಕೊಳ್ಳುತ್ತಿದ್ದಾರೆ.
ಕ್ರಮೇಣ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸರಕು ನಿರ್ವಹಣೆ ವಿಭಾಗಗಳ ಭದ್ರತಾ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಸಿಐಎಸ್‌ಎಫ್‌ಗೆ ಅವಕಾಶ ನೀಡುವ ಅಥವಾ ಸಿಐಎಸ್‌ಎಫ್ ಸೀಮಿತ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಹೊಂದಿರುವುದರಿಂದ ಮತ್ತು ಅದರ ಭದ್ರತೆಗೆ ದುಬಾರಿ ವೆಚ್ಚ ತಗಲುವುದರಿಂದ ಹೊಸ ಕ್ರಮಗಳನ್ನು ರೂಪಿಸುವ ಹಳೆಯ ಪ್ರಸ್ತಾವವೂ ನಮ್ಮ ಮುಂದಿದೆ ಎಂದು ಅಧಿಕಾರಿ ತಿಳಿಸಿದರು.