×
Ad

ಸಾಬರಮತಿ ಜೈಲಿನ ವಿನೂತನ ಉಪಕ್ರಮ: ‘ಪ್ಯಾಡ್‌ವಿಮೆನ್’ಹೆಜ್ಜೆ

Update: 2018-05-13 21:04 IST

ಅಹ್ಮದಾಬಾದ್,ಮೇ 13: ಇಲ್ಲಿಯ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿಯ ಮಹಿಳಾ ಕೈದಿಗಳು ಸ್ಯಾನಿಟರಿ ನ್ಯಾಪ್ಕಿನ್‌ಗಳ ತಯಾರಿಕೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಉದಾತ್ತ ಉಪಕ್ರಮವೊಂದಕ್ಕೆ ನಾಂದಿ ಹಾಡಿದ್ದಾರೆ.

ಈ ಉದ್ಯಮವು ಅವರಿಗೆ ಆದಾಯಮೂಲವಾಗಿರುವ ಜೊತೆಗೆ ಗುಜರಾತ್ ನಾದ್ಯಂತ ಜೈಲುಗಳಲ್ಲಿರುವ ಮಹಿಳಾ ಕೈದಿಗಳಿಗೆ ಹೆಚ್ಚಿನ ನೈರ್ಮಲ್ಯ ಸೌಲಭ್ಯ ವನ್ನೊದಗಿಸಲಿದೆ.

ನಗರದ ಸರಕಾರೇತರ ಸಂಸ್ಥೆ(ಎನ್‌ಜಿಒ)ಕರ್ಮಾ ಪ್ರತಿಷ್ಠಾನವು ಕಳೆದ ವಾರ ಸಾಬರಮತಿ ಜೈಲಿನ ಮಹಿಳಾ ಕೈದಿಗಳ ಬ್ಯಾರಕ್‌ನಲ್ಲಿ ಸ್ಥಾಪಿಸಿರುವ ಘಟಕದಲ್ಲಿ ತಯಾರಾಗುವ ಸ್ಯಾನಿಟರಿ ಪ್ಯಾಡ್‌ಗಳನ್ನು ರಾಜ್ಯದ ವಿವಿಧ ಜೈಲುಗಳಲ್ಲಿರುವ ಮಹಿಳಾ ಕೈದಿಗಳಿಗೆ ಉಚಿತವಾಗಿ ಒದಗಿಸಲಾಗುವುದು ಎಂದು ಅಧಿಕಾರಿ ಯೋರ್ವರು ತಿಳಿಸಿದರು.

ಮಹಿಳಾ ಕೈದಿಗಳಿಗೆ ಅರ್ಥಪೂರ್ಣ ಕೆಲಸವೊಂದನ್ನು ಒದಗಿಸುವ ಈ ಉದಾತ್ತ ಯೋಜನೆಯನ್ನು ರೂಪಿಸುವಲ್ಲಿ ಮಹಾತ್ಮಾ ಗಾಂಧಿಯವರು ಸ್ಥಾಪಿಸಿದ್ದ ನವಜೀವನ ಟ್ರಸ್ಟ್ ಕರ್ಮಾ ಪ್ರತಿಷ್ಠಾನ ಮತ್ತು ಜೈಲು ಅಧಿಕಾರಿಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಿತ್ತು.

ಆರು ತಿಂಗಳ ಹಿಂದೆ ತಾನು ಜೈಲಿಗೆ ಭೇಟಿ ನೀಡಿದ್ದಾಗ ಮಹಿಳಾ ಕೈದಿಗಳು ಯಾವುದೇ ಕೆಲಸವನ್ನು ಮಾಡದೇ ಸಮಯವನ್ನು ವ್ಯರ್ಥಗೊಳಿಸುತ್ತಿದ್ದನ್ನು ಕಂಡು ತನಗೆ ಈ ಯೋಜನೆಯನ್ನು ಆರಂಭಿಸುವ ಯೋಚನೆ ಹೊಳೆದಿತ್ತು ಎಂದು ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಪ್ರಿಯಾಂಶಿ ಪಟೇಲ್ ಹೇಳಿದರು.

ಭವಿಷ್ಯದಲ್ಲಿ ಟ್ರಸ್ಟ್ ಈ ಪ್ಯಾಡ್‌ಗಳನ್ನು ಸರಕಾರಿ ಏಜೆನ್ಸಿಗಳ ಮೂಲಕ ಸಬ್ಸಿಡಿ ದರಗಳಲ್ಲಿ ಮಾರಾಟ ಮಾಡಲಿದೆ ಎಂದರು. ಮಹಿಳಾ ಕೈದಿಗಳು ಜೈಲಿನಿಂದ ಬಿಡುಗಡೆಗೊಂಡ ನಂತರ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸುವ ಸಣ್ಣ ಉದ್ಯಮವನ್ನು ಆರಂಭಿಸಬಹುದಾಗಿದೆ ಎಂದೂ ಅವರು ತಿಳಿಸಿದರು.

ಸದ್ಯ ಒಂದು ತಯಾರಿಕಾ ಘಟಕವನ್ನು ಸ್ಥಾಪಿಸಲಾಗಿದ್ದು,12 ಮಹಿಳಾ ಕೈದಿಗಳು ಕೆಲಸ ಮಾಡುತ್ತಿದ್ದಾರೆ. ಕ್ರಮೇಣ ಘಟಕಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.

ಸಾಬರಮತಿ ಜೈಲಿನ ಕೈದಿಗಳಿಗಾಗಿ ಇಂತಹ ಇನ್ನಷ್ಟು ಯೋಜನೆಗಳನ್ನು ಆರಂಭಿಸುವಂತೆ ತಮ್ಮ ಸಂಸ್ಥೆಯು ಇನ್ನಷ್ಟು ಎನ್‌ಜಿಒಗಳನ್ನು ಉತ್ತೇಜಿಸಲಿದೆ ಎಂದು ನವಜೀವನ ಟ್ರಸ್ಟ್‌ನ ಆಡಳಿತ ಟ್ರಸ್ಟಿ ವಿವೇಕ ದೇಸಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News