ಭಾರತ ಕ್ರಿಕೆಟ್ ತಂಡದ ಈ ನಿರ್ಧಾರದಿಂದ ಬೇಸರವಾಗಿದೆ ಎಂದ ಇಯಾನ್ ಚಾಪೆಲ್
ಹೊಸದಿಲ್ಲಿ, ಮೇ.13: ಆಸ್ಟ್ರೇಲಿಯ ವಿರುದ್ಧ ಹಗಲು/ರಾತ್ರಿ ಟೆಸ್ಟ್ ಪಂದ್ಯವನ್ನು ಆಡದೆ ಇರುವ ಭಾರತೀಯ ಕ್ರಿಕೆಟ್ ಮಂಡಳಿಯ ನಿರ್ಧಾರದಿಂದ ಬೇಸರವಾಗಿದೆ ಎಂದು ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ತಿಳಿಸಿದ್ದಾರೆ. ಈ ಪಂದ್ಯದ ಹಿಂದಿನ ವಿಸ್ತಾರವಾದ ದೃಷ್ಟಿಕೋನದ ಬಗ್ಗೆ ಯೋಚಿಸದೆ ಕೇವಲ ತನ್ನ ನಿರ್ಧಾರವೇ ಅಂತಿಮವಾಗಬೇಕೆಂಬ ರೀತಿಯಲ್ಲಿ ಬಿಸಿಸಿಐ ವರ್ತಿಸಿರುವುದು ಖೇದಕರ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಡಿಲೇಡ್ ಹಗಲು/ರಾತ್ರಿ ಟೆಸ್ಟ್ ಕ್ರಿಕೆಟ್‌ನ ಅನಧಿಕೃತ ತಾಣವಾಗಿ ಬದಲಾಗಿದೆ. ಕಳೆದ ಮೂರು ವರ್ಷಗಳಿಂದ ಇಲ್ಲಿ ಹಗಲು/ರಾತ್ರಿ ಟೆಸ್ಟ್ ಪಂದ್ಯಗಳು ನಡೆಯುತ್ತಿದ್ದು ಬಹಳ ಜನಪ್ರಿಯತೆ ಗಳಿಸಿತ್ತು. ಈ ವರ್ಷ ಪ್ರಬಲ ಭಾರತ ತಂಡದ ಉಪಸ್ಥಿತಿ ಯಶಸ್ಸಿನ ಮಟ್ಟವನ್ನು ಹಲವು ಪಟ್ಟು ಹೆಚ್ಚಿಸುವ ನಿರೀಕ್ಷೆಯಿತ್ತು ಎಂದು ಚಾಪೆಲ್, ಕ್ರೀಡಾ ಜಾಲತಾಣಕ್ಕೆ ಬರೆದಿರುವ ಅಂಕಣದಲ್ಲಿ ತಿಳಿಸಿದ್ದಾರೆ. ಹಗಲು/ರಾತ್ರಿ ಪಂದ್ಯವನ್ನು ಆಡದಿರುವುದಕ್ಕೆ ಬಿಸಿಸಿಐ ಯಾವ ಸಮಜಾಯಿಷಿಯನ್ನು ನೀಡಿದರೂ ಅದರ ಈ ನಿರ್ಧಾರವು ದುರ್ಬಲ ವಿರೋಧಿಯ ಮುಂದೆ ಗೆಲುವು ಸಾಧಿಸುವ ತನ್ನ ತಂಡದ ಸಾಧ್ಯತೆಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಚಾಪೆಲ್ ಕಿಡಿಕಾರಿದ್ದಾರೆ. ಚೆಂಡು ವಿರೂಪಗೊಳಿಸಿದ ಆರೋಪ ಹೊತ್ತಿರುವ ಆಸ್ಟ್ರೇಲಿಯದ ಅಗ್ರಮಾನ್ಯ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧಕ್ಕೊಳಗಾಗಿರುವ ಕಾರಣ ಅವರು ಟೀಂ ಇಂಡಿಯ ವಿರುದ್ಧದ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಟ್ವೆಂಟಿ 20 ಪಂದ್ಯಗಳು ಅತೀಹೆಚ್ಚಾಗಿ ಆಡಲಾಗುತ್ತಿರುವ ಈ ಕಾಲದಲ್ಲಿ ಟೆಸ್ಟ್ ಕ್ರಿಕೆಟನ್ನು ಉಳಿಸುವ ಅಗತ್ಯ ಬಹಳವಾಗಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಿಸಿಸಿಐ ಕಾಳಜಿಯು ಕೇವಲ ಬಾಯಿ ಮಾತಾಗಿದೆ ಎಂದು ಆಸೀಸ್‌ನ ಮಾಜಿ ನಾಯಕ ಕುಟುಕಿದ್ದಾರೆ.