ಪಠ್ಯ ಪುಸ್ತಕದಲ್ಲಿ ಬಾಲಗಂಗಾಧರ ತಿಲಕ್‌ಗೆ ಅವಮಾನ: ಪುಸ್ತಕ ನಿಷೇಧಿಸಲು ತಿಲಕ್ ಕುಟುಂಬ ಆಗ್ರಹ

Update: 2018-05-13 17:23 GMT

ಜೈಪುರ, ಮೇ 13: ರಾಜಸ್ಥಾನದ 8ನೇ ತರಗತಿ ಪರಾಮರ್ಶೆ ಪುಸ್ತಕದಲ್ಲಿ ಸಾಮಾಜಿಕ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರನ್ನು ‘ಭಯೋತ್ಪಾದನೆ ಪಿತಾಮಹ’ ಎಂದು ಕರೆದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪುಣೆಯಲ್ಲಿರುವ ತಿಲಕ್ ಕುಟುಂಬ, ಈ ವಿಷಯದ ಕುರಿತಂತೆ ರಾಜಸ್ಥಾನ ಸರಕಾರವನ್ನು ಸಂಪರ್ಕಿಸಿದೆ.  

ತಿಲಕ್ ಕುರಿತ ಅವಮಾನಕರ ಹೇಳಿಕೆ ತೆಗೆಯುವಂತೆ ಹಾಗೂ ಪುಸ್ತಕ ನಿಷೇಧಿಸುವಂತೆ ಕುಟುಂಬ ರಾಜಸ್ಥಾನ ಸರಕಾರವನ್ನು ಆಗ್ರಹಿಸಿದೆ. ಪುಸ್ತಕವನ್ನು ಪ್ರಕಟಿಸಿರುವವರು ಹಾಗೂ ಇದರ ಅಂಶಗಳಿಗೆ ಅನುಮೋದನೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬ ಆಗ್ರಹಿಸಿದೆ. ತನ್ನ 64 ವರ್ಷದಲ್ಲಿ 50 ವರ್ಷವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ವ್ಯಕ್ತಿಯ ಬಗ್ಗೆ ಇಂತಹ ಅವಮಾನಕರ ಹೇಳಿಕೆ ನೀಡಿದರೆ ನಮಗೆ ಆಘಾತ ಆಗುತ್ತದೆ. ಆಕ್ರೋಶ ಉಂಟಾಗುತ್ತದೆ. ಇದು ಅವರಿಗೆ ಗೌರವ ನೀಡುವ ರೀತಿಯೇ ? ಎಂದು ತಿಲಕ್ ಅವರ ಮರಿ ಮೊಮ್ಮಗಳು ಹಾಗೂ ಪುಣೆಯ ಮೇಯರ್ ಮಕ್ತಾ ತಿಲಕ್ ಹೇಳಿದ್ದಾರೆ.

ಇದರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾತ್ರ ಅವಮಾನ ಆಗಿರುವುದಲ್ಲ, ರಾಷ್ಟ್ರಕ್ಕೆ ಕೂಡ ಅವಮಾನ ಆಗಿದೆ. ಪುಸ್ತಕದಿಂದ ಅವಮಾನಕರ ಹೇಳಿಕೆಯನ್ನು ತೆಗೆಯುವುದು ಮಾತ್ರವಲ್ಲ ಪುಸ್ತಕವನ್ನು ನಿಷೇಧಿಸುವಂತೆ ಕೂಡ ಆಗ್ರಹಿಸಿ ನಾನು ರಾಜಸ್ಥಾನ ಸರಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಮುಕ್ತಾ ತಿಲಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News