ಬಿಜೆಪಿ ಸೋಲಿಸಲು 2019ರ ಚುನಾವಣೆಗೆ ತೃತೀಯ ರಂಗ: ಶರದ್ ಯಾದವ್ ಹೇಳಿದ್ದೇನು ?

Update: 2018-05-13 18:56 GMT

ಹೊಸದಿಲ್ಲಿ,ಮೇ 13: 2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ತೃತೀಯ ರಂಗವೊಂದು ರೂಪುಗೊಳ್ಳುವ ಸಾಧ್ಯತೆಯು ತನಗೆ ಕಂಡುಬರುತ್ತಿಲ್ಲ ಎಂದು ಹೇಳಿರುವ ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ ಅವರು,ಆಡಳಿತ ಬಿಜೆಪಿಯ ವಿರುದ್ಧ ಹೋರಾಡಲು ಎಲ್ಲ ಪ್ರತಿಪಕ್ಷಗಳು ಒಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವೊಂದನ್ನು ಒದಗಿಸುವ ಕೆಲವು ರಾಜಕೀಯ ಪಕ್ಷಗಳ ಪ್ರಯತ್ನಗಳಿಂದ ಬಿಜೆಪಿ ವಿರುದ್ಧ ಪ್ರಬಲ ರಂಗವೊಂದನ್ನು ಸಂಘಟಿಸುವ ಇತರ ಪ್ರತಿಪಕ್ಷಗಳ ನಡುವಿನ ಒಗ್ಗಟ್ಟಿನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಿದರು.

ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಟಿಆರ್‌ಎಸ್ ವರಿಷ್ಠ ಕೆ.ಚಂದ್ರಶೇಖರ ರಾವ್ ಅವರು ನಡೆಸುತ್ತಿರುವ ಪ್ರಯತ್ನಗಳು ಪ್ರತಿಪಕ್ಷ ಒಗ್ಗಟ್ಟಿಗೆ ಹಾನಿಯನ್ನು ಮಾಡುತ್ತವೆಯೇ ಎಂಬ ಪ್ರಶ್ನೆಗೆ,ತೃತೀಯ ರಂಗವು ಅಸ್ತಿತ್ವಕ್ಕೆ ಬರುತ್ತದೆ ಎಂದು ತಾನು ಭಾವಿಸಿಲ್ಲ. ಕೆಲ ಸಮಯ ಕಾದು ನೋಡಿ,ತೃತೀಯ ರಂಗವನ್ನು ರಚಿಸಲು ಪ್ರಯತ್ನಿಸುತ್ತಿರುವವರು ಪ್ರತಿಪಕ್ಷ ಒಗ್ಗಟ್ಟಿನ ಬಗ್ಗೆ ತಾವೇ ಮಾತನಾಡಲು ಆರಂಭಿಸಲಿದ್ದಾರೆ ಎಂದು ಯಾದವ್ ಉತ್ತರಿಸಿದರು.

 ಈ ಬಾರಿ ಸಂವಿಧಾನದ ರಕ್ಷಣೆ ಸವಾಲು ಆಗಿದೆ. ಮೋದಿ ಸರಕಾರವು ಭಾರತವನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದು, ಅದರಿಂದ ದೇಶವನ್ನು ಪಾರು ಮಾಡಲು ಎಲ್ಲ ಪಕ್ಷಗಳು ಮತ್ತು ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಲ್ಲಿ ಲಭಿಸಿರುವ ಯಶಸ್ಸು ತನಗೆ ತೃಪ್ತಿಯನ್ನುಂಟು ಮಾಡಿದೆ ಎಂದರು.

 ತಾನು ಎಲ್ಲ ಪ್ರತಿಪಕ್ಷಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಕಾಲವು ಕೂಡಿ ಬಂದಾಗ ಅವುಗಳನ್ನು ಒಗ್ಗೂಡಿಸುತ್ತೇನೆ ಎಂದು ಹೇಳಿದರು.

ಪ್ರತಿಪಕ್ಷಗಳ ಒಗ್ಗಟ್ಟು ಏಕೈಕ ಪರ್ಯಾಯವಾಗಿದೆ ಎಂದು ಒತ್ತಿ ಹೇಳಿದ ಯಾದವ್,ಪಕ್ಷಗಳು ಅಲ್ಪ ಮತ್ತು ಪ್ರಾದೇಶಿಕ ಲಾಭಗಳಿಗಾಗಿ ಈ ಸತ್ಯವನ್ನು ಕಡೆಗಣಿಸಿದರೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯು ಅವುಗಳಿಗೆ ಪಾಠ ಕಲಿಸಲಿದೆ ಎಂದರು.

ಸಮಾನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳನ್ನು ಒಂದುಗೂಡಿಸುವುದು ಕಠಿಣ ಕಾರ್ಯ ಎನ್ನುವುದನ್ನು ಅವರು ಒಪ್ಪಿಕೊಂಡರಾದರೂ,ಅದು ಅಸಾಧ್ಯವಲ್ಲ ಎಂದು ಹೇಳಿದರು.

ಬಿಜೆಪಿಯ ಉಚ್ಛ್ರಾಯದಲ್ಲಿ ಕಾಂಗ್ರೆಸ್,ಎಸ್‌ಪಿ,ಆರ್‌ಜೆಡಿ ಮತ್ತು ರಾಷ್ಟ್ರೀಯ ಲೋಕ ದಳಗಳ ಯುವ ನಾಯಕರ ತಪ್ಪುಗಳ ಕೊಡುಗೆಯಿದೆಯೇ ಎಂಬ ಪ್ರಶ್ನೆಗೆ, ಅನುಭವಗಳನ್ನು ಕಡೆಗಣಿಸುವವರು ಅದಕ್ಕೆ ದಂಡನೆಯನ್ನು ಪಡೆಯುತ್ತಾರೆ. ಆದರೆ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡಾಗ ಅವರಿಗೆ ತಕ್ಷಣವೇ ಪುರಸ್ಕಾರವು ಕೂಡ ದೊರೆಯುತ್ತದೆ ಎಂದು ಉತ್ತರಿಸಿದ ಅವರು,ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭ ಅಖಿಲೇಶ ಯಾದವ ಅವರು ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಅವರ ಮಾತನ್ನು ಕೇಳದೇ ಬಿಜೆಪಿಯೆದುರು ಸೋತಿದ್ದು ಮತ್ತು ಉಪ ಚುನಾವಣೆಯಲ್ಲಿ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎರಡೂ ಕ್ಷೇತ್ರಗಳನ್ನು ಗೆದ್ದಿದ್ದನ್ನು ನಿದರ್ಶನವಾಗಿ ನೀಡಿದರು.

ಹೀಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದವರಿಗೆ ಬಿಜೆಪಿಯು ಪಾಠ ಕಲಿಸುತ್ತದೆ ಎಂದರು.

ಇಂದು ದೇಶದ ಸಾಮಾಜಿಕ ಸ್ವರೂಪವು ತುರ್ತುಸ್ಥಿತಿ ಸಂದರ್ಭ ಇದ್ದಂತೆ ಒತ್ತಡದಲ್ಲಿದೆ ಎಂದ ಅವರು ನೋಟು ನಿಷೇಧ,ಜಿಎಸ್‌ಟಿಗಳಿಂದಾಗಿ ದೇಶದ ಆರ್ಥಿಕತೆಯು ಹದಗೆಟ್ಟಿದೆ ಎಂದು ಆರೋಪಿಸಿದರು.

ನಿತೀಶ ಕುಮಾರ ಅವರು ಮಹಾಮೈತ್ರಿಯೊಂದಿಗೆ ಸಂಬಂಧ ಕಡಿದುಕೊಂಡ ಬಳಿಕ ತನ್ನ ಬೆಂಬಲಿಗರು ಲೋಕತಾಂತ್ರಿಕ ಜನತಾ ದಳ(ಎಲ್‌ಜೆಡಿ)ವನ್ನು ಹುಟ್ಟುಹಾಕಿದ್ದಾರೆ,ಆದರೆ ತಾನು ಹೊಸಪಕ್ಷದ ಭಾಗವಾಗಿಲ್ಲ ಎಂದ ಯಾದವ, ಮೇ 18ರಂದು ಪಕ್ಷದ ಪ್ರಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತನಾಗಿ ಭಾಗವಹಿಸುತ್ತಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News