ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ : 3 ಬಲಿ, ಹಲವರಿಗೆ ಗಾಯ

Update: 2018-05-14 08:42 GMT

ಕೊಲ್ಕತ್ತಾ,ಮೇ.14 : ಪಶ್ಚಿಮ ಬಂಗಾಳದಲ್ಲಿ ಇಂದು ನಡೆಯುತ್ತಿರುವ ಪಂಚಾಯತ್ ಚುನಾವಣೆಯ ಸಂದರ್ಭ ರಾಜ್ಯದ ಹಲವೆಡೆ ಪರಸ್ಪರ ವಿರೋಧಿ ಗುಂಪುಗಳ ನಡುವೆ ನಡೆದ ಘರ್ಷಣೆಗಳಲ್ಲಿ ಕನಿಷ್ಠ ಮೂವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಮತಪೆಟ್ಟಿಗೆಗಳಿಗೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿದ್ದು ಹಲವೆಡೆ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ, ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆಗಳೂ ವರದಿಯಾಗಿವೆ.

ರಾಜ್ಯದಲ್ಲಿರುವ ಒಟ್ಟು 58,692 ಪಂಚಾಯತ್ ಸ್ಥಾನಗಳ ಪೈಕಿ ಆಡಳಿತ ತೃಣಮೂಲ ಕಾಂಗ್ರೆಸ್ ಈಗಾಗಲೇ  ಅವಿರೋಧವಾಗಿ 20,163 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೂ ಉಳಿತ ಸ್ಥಾನಗಳಿಗಾಗಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ನಡುವೆ ನೇರ ಹಣಾಹಣಿಯಿದ್ದರೂ ಬಿಜೆಪಿ ಕೂಡ ತನ್ನ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿದೆ.

ಬಿರಪರ ಎಂಬಲ್ಲಿ ತೃಣಮೂಲ ಕಾರ್ಯಕರ್ತರು ಬೂತ್ ಒಂದನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದಾಗ ಉಂಟಾದ ಗೊಂದಲದಲ್ಲಿ ಐದು ಮಂದಿ ಪತ್ರಕರ್ತರು ಗಾಯಗೊಂಡಿದಾರೆ.

ನಡಿಯಾ ಜಿಲ್ಲೆಯ ಸಂತಿಪುರ್ ಎಂಬಲ್ಲಿ ನಡೆದ ಘರ್ಷಣೆ ವೇಳೆ 27 ವರ್ಷದ ಸಂಜಿತ್ ಪ್ರಮಾಣಿಕ್ ಗುಂಡೇಟಿನ ಗಾಯಕ್ಕೆ ಬಲಿಯಾಗಿದ್ದಾರೆ. ಉತ್ತರ ಪರಗಣ ಜಿಲ್ಲೆಯ ಪಂಚಪೊತ ಪಂಚಾಯತದ ಬರಾಸತ್ ಎಂಬಲ್ಲಿ ಕಚ್ಛಾ ಬಾಂಬ್ ದಾಳಿಯಲ್ಲಿ ಸಿಪಿಎಂ ಕಾರ್ಯಕರ್ತ ತೈಬುರ್ ಗಯೆನ್ ಮೃತಪಟ್ಟಿದ್ದಾರೆ. 

ಮುರ್ಷಿದಾಬಾದ್ ನ ಬೆಲ್ಡಂಗ ಎಂಬಲ್ಲಿ ಕೂಡ ಕಚ್ಛಾ ಬಾಂಬ್ ದಾಳಿಯಲ್ಲಿ  ಬಿಜೆಪಿ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಮಾಲ್ಡಾ ಜಿಲ್ಲೆಯ ಸುಜಾಪುರ್ ಎಂಬಲ್ಲಿ  ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವಿನ  ಘರ್ಷಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ಪತಿಯ ಮೇಲೆ ಹಲ್ಲೆ ನಡೆಸಲಾಗಿದೆ.

ಸಿಪಿಎಂ ಆರೋಪಿಸಿರುವಂತೆ ದಕ್ಷಿಣ 24 ಪರಗಣ ಜಿಲ್ಲೆಯ ನಾಮಖಾನ ಎಂಬಲ್ಲಿ  ಟಿಎಂಸಿ ಬೆಂಬಲಿತ ದುಷ್ಕರ್ಮಿಗಳ ಗುಂಪೊಂದು ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ಸಿಪಿಎಂ ಕಾರ್ಯಕರ್ತ ಹಾಗೂ ಆತನ ಪತ್ನಿ ಸಾವನ್ನಪ್ಪಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ. ದಂಪತಿಯ ಸಾವಿನ ಬಗ್ಗೆ ಪೊಲೀಸರು ದೃಢಪಡಿಸಿದ್ದಾರಾದರೂ ಬೆಂಕಿ ಹೇಗೆ ಹತ್ತಿಕೊಂಡಿತೆಂದು ಸ್ಪಷ್ಟವಾಗಿಲ್ಲ.

ಹಿಂಸೆ ನಡೆಸಲು ಕೆಲವು ಯುವಕರು ಬಂದಿದ್ದನ್ನು ಪ್ರತಿಭಟಿಸಿ ನಡಿಯಾದ ಸಂತೀಪುರ್ ಎಂಬಲ್ಲಿ ಗ್ರಾಮಸ್ಥರು ಆ ಯುವಕರ 11 ಮೊಟಾರ್ ಸೈಕಲ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ದಕಿಣ 24 ಪರಗಣ ಜಿಲ್ಲೆಯ ರಾಮಪುರ್ ಅಲೋಕಮಾಲ ಶಾಲೆಯೊಂದರ ಪಕ್ಕದ ತೊರೆಯಲ್ಲಿ ಮತಪತ್ರಗಳು ತೇಲುತ್ತಿರುವುದು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News