ಬ್ಯಾಲೆಟ್ ಪೇಪರ್ ಉಪಯೋಗಿಸಿ ಚುನಾವಣೆ ನಡೆಸಿ: ಬಿಜೆಪಿಗೆ ಉದ್ಧವ್ ಠಾಕ್ರೆ ಸವಾಲು

Update: 2018-05-15 12:59 GMT

ಮುಂಬೈ, ಮೇ 15: ಇವಿಎಂ ಗಳ ಬಗ್ಗೆ ಇರುವ ಸಂಶಯಗಳನ್ನು ನಿವಾರಿಸಲು ಮತಪತ್ರಗಳನ್ನು (ಬ್ಯಾಲೆಟ್ ಪೇಪರ್) ಉಪಯೋಗಿಸಿ ಚುನಾವಣೆ ನಡೆಸಬೇಕೆಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಬಿಜೆಪಿಗೆ ಸವಾಲೆಸೆದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಇಂದು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆಯೇ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಉದ್ಧವ್ ಅವರೊಡನೆ ಸಹಮತ ವ್ಯಕ್ತಪಡಿಸಿ ``ಇದು ಇವಿಎಂಗಳ ವಿಜಯ'' ಎಂದು ಟ್ವೀಟ್ ಮಾಡಿದ್ದರು. ಬಿಜೆಪಿ ಉಪಚುನಾವಣೆಗಳಲ್ಲಿ ಸೋಲುತ್ತಿದ್ದರೂ ವಿಧಾನಸಭಾ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

"ನಿಮಗೆ (ಬಿಜೆಪಿಗೆ) ನಿಮ್ಮ ಮೇಲೆ ವಿಶ್ವಾಸವಿದ್ದರೆ, ಮತಪತ್ರಗಳನ್ನು ಉಪಯೋಗಿಸಿ ಚುನಾವಣೆ ನಡೆಸಿ, ಎಲ್ಲರ ಸಂಶಯಗಳನ್ನೂ ಒಮ್ಮೆಗೇ ನಿವಾರಿಸಬಹುದು'' ಎಂದು ಉದ್ಧವ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ಎದುರಿಸುತ್ತಿರುವ ಪ್ರಥಮ ವಿಧಾನಸಭಾ ಚುನಾವಣೆ ಇದಲ್ಲವೇ ಎಂದು ಕೇಳಿದಾಗ ``ಕೆಲವೊಮ್ಮೆ ನೀವು ಗೆಲ್ಲುತ್ತೀರಿ ಹಾಗೂ ಮತ್ತು ಕೆಲವೊಮ್ಮೆ ಸೋಲುತ್ತೀರಿ, ಪ್ರಯತ್ನಗಳನ್ನು ಮುಂದುವರಿಸಬೇಕು'' ಎಂದರು. ಬಿಜೆಪಿಯ ಯಶಸ್ಸಿಗೆ ಅದನ್ನು ಅಭಿನಂದಿಸಿದ ಅವರು ರಾಜ್ಯದ ಜನರು ಇನ್ನು ಅಚ್ಛೇ ದಿನ್ ಕಾಣಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News