ಪಿಂಚಣಿ ಪಡೆಯಲು ಆಧಾರ್ ಕಡ್ಡಾಯವಲ್ಲ

Update: 2018-05-15 16:47 GMT

ಹೊಸದಿಲ್ಲಿ, ಮೇ 15: ಪಿಂಚಣಿ ಪಡೆಯಲು ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಇಲ್ಲಿ ನಡೆದ ಸ್ವಯಂಸೇವಾ ಸಂಸ್ಥೆಯ ಸ್ಥಾಯಿ ಸಮಿತಿಯ 30ನೇ ಸಭೆಯಲ್ಲಿ ಅವರು, ಬ್ಯಾಂಕ್‌ಗಳಿಗೆ ಭೇಟಿ ನೀಡಿ ಜೀವನ ಪ್ರಮಾಣ ಪತ್ರ ಸಲ್ಲಿಸಲು ತಂತ್ರಜ್ಞಾನ ಬಳಸಲು ಆಧಾರ್ ಒಂದು ಹೆಚ್ಚುವರಿ ಸೌಲಭ್ಯ ಎಂದಿದ್ದಾರೆ. ತಮ್ಮ ಬ್ಯಾಂಕ್ ಅಕೌಂಟ್‌ನೊಂದಿಗೆ ಆಧಾರ್ ಜೋಡಿಸದೇ ಇದ್ದ ಕೆಲವು ನಿವೃತ್ತ ಉದ್ಯೋಗಿಗಳು ಪಿಂಚಣಿ ಪಡೆಯಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಪ್ರತಿಪಾದನೆ ಮಹತ್ವ ಪಡೆದುಕೊಂಡಿದೆ. ಸಭೆಯ ನಿರ್ಧಾರದ ಪ್ರಕಾರ ಸರಕಾರ ಉದ್ಯೋಗಿಗಳು ಪಿಂಚಣಿ ಪಡೆಯಲು ಆಧಾರ್ ಅನ್ನು ಕಡ್ಡಾಯ ಮಾಡಿಲ್ಲ ಎಂದು ಸಚಿವರು ಹೇಳಿದ್ದಾರೆ.

 ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಗುರುತು ಹಾಗೂ ವಿಳಾಸ ಪುರಾವೆಗೆ 12 ಅಂಕೆಗಳ ಆಧಾರ್ ಕಾರ್ಡ್ ಪರಿಚಯಿಸಿತ್ತು. ಪ್ರಸ್ತುತ 48.41 ಲಕ್ಷ ಕೇಂದ್ರ ಸರಕಾರದ ಉದ್ಯೋಗಿಗಳು ಹಾಗೂ 61.17 ಲಕ್ಷ ಪಿಂಚಣಿ ಸೌಲಭ್ಯ ಪಡೆಯುವವರು ಇದ್ದಾರೆ. ಉದ್ಯೋಗಿಗಳು ಹಾಗೂ ಪಿಂಚಣಿದಾರರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ವಿವಿಧ ಉಪಕ್ರಮಗಳನ್ನು ಆರಂಭಿಸಿದೆ ಎಂದು ಸಿಂಗ್ ಹೇಳಿದರು. ‘‘ಉದಾಹರಣೆಗೆ ಕನಿಷ್ಠ ಪಿಂಚಣಿಯನ್ನು 9,000ಕ್ಕೆ ಏರಿಸಲಾಗಿದೆ. ಗ್ರಾಚ್ಯುವಿಟಿಯ ಮಿತಿಯನ್ನು 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸ್ಥಿರ ವೈದ್ಯಕೀಯ ಭತ್ಯೆಯನ್ನು ತಿಂಗಳಿಗೆ 1,000 ರೂ.ಗೆ ಏರಿಸಲಾಗಿದೆ’’ ಎಂದು ಅವರು ತಿಳಿಸಿದರು. ನಿರಂತರ ಹಾಜರಾತಿ ಭತ್ಯೆಯನ್ನು 4,500 ರೂ.ನಿಂದ 6,750 ರೂ.ಗೆ 2017 ಜುಲೈ 1ರಿಂದ ಅನ್ವಯವಾಗುವಂತೆ ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News