ವಿಮಾನದ ಕಿಟಕಿಯಿಂದ ಪೈಲಟ್ ನ ಅರ್ಧ ದೇಹ ಹೊರಕ್ಕೆ!

Update: 2018-05-15 16:50 GMT

ಬೀಜಿಂಗ್, ಮೇ 16: ಸಿಚುವಾನ್ ಏರ್‌ಲೈನ್ಸ್ ವಿಮಾನವೊಂದರ ಕಾಕ್‌ಪಿಟ್‌ನ ಕಿಟಕಿ ಗಾಜೊಂದು ಹಾರಿಹೋಗಿ, ಸಹ ಪೈಲಟ್‌ನ ಅರ್ಧ ದೇಹ ವಿಮಾನದಿಂದ ಹೊರ ತಳ್ಳಲ್ಪಟ್ಟ ಘಟನೆಯೊಂದು ಚೀನಾದಿಂದ ವರದಿಯಾಗಿದೆ.

ಬಳಿಕ ಕ್ಯಾಪ್ಟನ್ ಲಿಯು ಚುವಾನ್‌ಜಿಯಾನ್ ಏರ್‌ಬಸ್ ಎ319 ವಿಮಾನವನ್ನು ತುರ್ತಾಗಿ ಇಳಿಸಿದರು.

ವಿಮಾನವು 32,000 ಅಡಿ ಎತ್ತರವನ್ನು ತಲುಪಿದಾಗ ಕಾಕ್‌ಪಿಟ್‌ನಲ್ಲಿ ಕಿವಿಗಡಚಿಕ್ಕುವ ಸದ್ದು ಕೇಳಿಸಿತು ಎಂದು ಕ್ಯಾಪ್ಟನ್ ಚುವಾನ್‌ಜಿಯಾನ್ ‘ಚೆಂಗ್ಡು ಎಕನಾಮಿಕ್ ಡೇಲಿ’ ಪತ್ರಿಕೆಗೆ ತಿಳಿಸಿದರು.

ಆಗ ಕಾಕ್‌ಪಿಟ್‌ನಲ್ಲಿ ಒಮ್ಮೆಲೆ ಒತ್ತಡ ಕುಸಿತ ಸಂಭವಿಸಿತು ಹಾಗೂ ಉಷ್ಣತೆಯೂ ಕುಸಿಯಿತು ಎಂದರು. ಪರಿಶೀಲಿಸಿದಾಗ ಕಾಕ್‌ಪಿಟ್‌ನ ಬಲಭಾಗದ ಕಿಟಿಕಿ ಗಾಜು ಇರಲಿಲ್ಲ ಎಂದು ಅವರು ನುಡಿದರು.

‘‘ಅಲ್ಲಿ ಯಾವುದೇ ಎಚ್ಚರಿಕೆ ಸಂದೇಶವಿರಲಿಲ್ಲ. ಕಿಟಿಕಿ ಗಾಜು ಒಮ್ಮೆಲೇ ದೊಡ್ಡ ಸದ್ದಿನೊಂದಿಗೆ ಒಡೆಯಿತು. ನಾನು ನೋಡಿದಾಗ ನನ್ನ ಸಹ ಪೈಲಟ್‌ರ ಅರ್ಧ ದೇಹ ವಿಮಾನದಿಂದ ಹೊರಗಿತ್ತು’’ ಎಂದರು.

ಸೀಟ್‌ಬೆಲ್ಟ್ ಧರಿಸಿದ್ದ ಸಹಪೈಲಟ್‌ನನ್ನು ಒಳಗೆ ಎಳೆದುಕೊಳ್ಳಲಾಯಿತು. ಅವರಿಗೆ ಸಣ್ಣಪುಟ್ಟ ಗಾಯಗಳಾದವು. ವಿಮಾನದಲ್ಲಿದ್ದ 119 ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ಏರ್‌ಲೈನ್ಸ್ ಅಧಿಕಾರಿಯೊಬ್ಬರು ತಿಳಿಸಿದರು.

‘‘ಕಾಕ್‌ಪಿಟ್‌ನಲ್ಲಿದ್ದ ಎಲ್ಲ ವಸ್ತುಗಳು ಗಾಳಿಯಲ್ಲಿ ಹಾರುತ್ತಿದ್ದವು. ಹೆಚ್ಚಿನ ಉಪಕರಣಗಳು ಹಾಳಾಗಿದ್ದವು’’ ಎಂದರು.

ಸೋಮವಾರ ಬೆಳಗ್ಗೆ ವಿಮಾನವು ಚಾಂಗ್‌ಕಿಂಗ್‌ನಿಂದ ಟಿಬೆಟ್ ರಾಜಧಾನಿ ಲಾಸಾಕ್ಕೆ ಹೋಗುತ್ತಿತ್ತು.

ಬಳಿಕ ವಿಮಾನವನ್ನು ಕ್ಯಾಪ್ಟನ್ ಚೆಂಗ್ಡು ನಗರದ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಿದರು. ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಕ್ಯಾಪ್ಟನ್‌ರನ್ನು ‘ಹೀರೋ’ ಎಂಬುದಾಗಿ ಬಣ್ಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News