ಅಮೆರಿಕನ್ ಭಾರತೀಯ ವಿಜ್ಞಾನಿ ಜಾರ್ಜ್ ಸುದರ್ಶನ್ ನಿಧನ

Update: 2018-05-15 17:04 GMT

 ಹ್ಯೂಸ್ಟನ್ (ಅಮೆರಿಕ), ಮೇ 15: ಖ್ಯಾತ ಭಾರತೀಯ-ಅಮೆರಿಕನ್ ಭೌತ ವಿಜ್ಞಾನಿ ಇ. ಸಿ. ಜಾರ್ಜ್ ಸುದರ್ಶನ್ ರವಿವಾರ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಗುರುವಾರ ನಡೆಯಲಿದೆ.

86 ವರ್ಷದ ಸುದರ್ಶನ್ ವಯೋಸಹಜ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ಪತ್ನಿ ಭಾಮತಿ ಸುದರ್ಶನ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸುದರ್ಶನ್ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಅವರು 1931ರಲ್ಲಿ ಕೇರಳದ ಕೊಟ್ಟಾಯಂನಲ್ಲಿ ಜನಿಸಿದ್ದರು.

ಅವರ ‘ವಿ-ಎ ತಿಯರಿ ಆಫ್ ವೀಕ್ ಇಂಟರ್ಯಾಕ್ಷನ್ಸ್’ ಸಂಶೋಧನೆಯು ಅವರಿಗೆ ಖ್ಯಾತಿ ತಂದು ಕೊಟ್ಟಿತು.

ಕ್ವಾಂಟಮ್ ಆಪ್ಟಿಕ್ಸ್, ಟ್ಯಾಕಿಯೋನ್ಸ್, ಕ್ವಾಂಟಮ್ ಝೆನೊ ಇಫೆಕ್ಟ್, ನಾನ್-ಇನ್‌ವೇರಿಯನ್ಸ್ ಗ್ರೂಪ್ಸ್, ಪಾಸಿಟಿವ್ ಮ್ಯಾಪ್ಸ್ ಆಫ್ ಡೆನ್ಸಿಟಿ ಮ್ಯಾಟ್ರಿಸಸ್, ಕ್ವಾಂಟಮ್ ಕಂಪ್ಯೂಟೇಶನ್ ಸೇರಿದಂತೆ ಭೌತಶಾಸ್ತ್ರದ ಹಲವಾರು ಕ್ಷೇತ್ರಗಳಲ್ಲಿ ಅವರು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ.

ಪದ್ಮವಿಭೂಷಣ ವಿಜೇತ

2007ರಲ್ಲಿ ಭಾರತ ಸರಕಾರವು ಎರಡನೇ ಉನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಅವರಿಗೆ ನೀಡಿದೆ.

2010ರಲ್ಲಿ, ಸೈದ್ಧಾಂತಿಕ ಭೌತಶಾಸ್ತ್ರ, ಕಂಪ್ಯೂಟೇಶನಲ್ ರಸಾಯನಶಾಸ್ತ್ರ ಮತ್ತು ಗಣಿತದ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದವರಿಗೆ ನೀಡಲಾಗುವ ‘ಡಿರಾಕ್’ ಪದಕವನ್ನೂ ಅವರಿಗೆ ನೀಡಲಾಗಿತ್ತು.

ಅವರನ್ನು ನೊಬೆಲ್ ಪ್ರಶಸ್ತಿಗೆ ಒಂಬತ್ತು ಬಾರಿ ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಶಸ್ತಿ ಸಿಕ್ಕಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News