2 ಕಾಲುಗಳಿಲ್ಲದೆ ಮೌಂಟ್ ಎವರೆಸ್ಟ್ ಹತ್ತಿದ ಧೀರ

Update: 2018-05-15 17:36 GMT

ಕಠ್ಮಂಡು, ಮೇ 15: ನಾಲ್ಕು ದಶಕಗಳ ಹಿಂದೆ ಮೌಂಟ್ ಎವರೆಸ್ಟ್‌ನಲ್ಲಿ ಹಿಮಹುಣ್ಣು (ಫ್ರಾಸ್ಟ್‌ಬೈಟ್)ವಿನಿಂದಾಗಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಚೀನಾದ ಪರ್ವತಾರೋಹಿಯೊಬ್ಬರು ಕೊನೆಗೂ ಸೋಮವಾರ ವಿಶ್ವದ ಅತ್ಯುನ್ನತ ಶಿಖರವನ್ನು ಏರಿದ್ದಾರೆ.

69 ವರ್ಷದ ಕ್ಸಿಯಾ ಬೋಯು ಸೋಮವಾರ ಮುಂಜಾನೆ ತನ್ನ 5ನೇ ಪ್ರಯತ್ನದಲ್ಲಿ 8,848 ಮೀಟರ್ ಎತ್ತರದ ಶಿಖರದ ತುದಿಯ ಮೇಲೆ ನಿಂತರು.

ಎರಡೂ ಕಾಲುಗಳನ್ನು ಹೊಂದಿರದ ಪರ್ವತಾರೋಹಿಗಳು ಎವರೆಸ್ಟ್ ಶಿಖರವನ್ನು ಏರುವುದನ್ನು ನಿಷೇಧಿಸುವ ವಿವಾದಾಸ್ಪದ ನಿಯಮವನ್ನು ಹಿಂದಕ್ಕೆ ಪಡೆದುಕೊಂಡ ತಿಂಗಳುಗಳ ಬಳಿಕ ಅವರು ಈ ಸಾಧನೆ ಮಾಡಿದ್ದಾರೆ.

‘‘ಅವರು ತಂಡದ ಇತರ ಏಳು ಸದಸ್ಯರ ಜೊತೆ ಸೋಮವಾರ ಮುಂಜಾನೆ ಎವರೆಸ್ಟ್ ಶೃಂಗವನ್ನು ತಲುಪಿದರು’’ ಎಂದು ಕ್ಸಿಯಾ ಅವರ ಎವರೆಸ್ಟ್ ಯಾನಕ್ಕೆ ಏರ್ಪಾಡುಗಳನ್ನು ಮಾಡಿರುವ ‘ಇಮೇಜಿನ್ ಟ್ರಕ್ ಆ್ಯಂಡ್ ಎಕ್ಸ್‌ಪೆಡಿಶನ್’ನ ದಾವ ಫುಟಿ ಶೆರ್ಪಾ ತಿಳಿಸಿದರು.

ಕ್ಸಿಯಾ ಎವರೆಸ್ಟ್ ಹತ್ತಲು ಮೊದಲ ಪ್ರಯತ್ನ ನಡೆಸಿದ್ದು 1975ರಲ್ಲಿ. ಆದರೆ, ಕೆಟ್ಟ ಹವಾಮಾನದಿಂದಾಗಿ ಆ ಪ್ರಯತ್ನ ಕೈಗೂಡಲಿಲ್ಲ. ಆ ಪ್ರಯತ್ನದಲ್ಲಿ ಅವರು ಎವರೆಸ್ಟ್ ಶಿಖರದ ಸಮೀಪ ಅತ್ಯಂತ ಕನಿಷ್ಠ ಮಟ್ಟದ ಆಮ್ಲಜನಕದ ವಾತಾವರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅತ್ಯಂತ ಶೀತಲ ವಾತಾವರಣದಲ್ಲಿ ಅವರ ಎರಡೂ ಕಾಲುಗಳು ಹಿಮಹುಣ್ಣಿಗೆ ಒಳಗಾದವು. ಅವರು ಅಂತಿಮವಾಗಿ ತನ್ನೆರಡೂ ಪಾದಗಳನ್ನು ಕಳೆದುಕೊಳ್ಳಬೇಕಾಯಿತು.

1996ರಲ್ಲಿ ರಕ್ತ ಕ್ಯಾನ್ಸರ್ ಹಿನ್ನೆಲೆಯಲ್ಲಿ ಅವರ ಎರಡೂ ಕಾಲುಗಳನ್ನು ಮೊಣಗಂಟಿನಿಂದ ಕೆಳಗೆ ಕತ್ತರಿಸಲಾಯಿತು.

ಹಠ ಬಿಡದ ಅವರು 2014 ಮತ್ತು 2015ರಲ್ಲಿ ಎವರೆಸ್ಟ್‌ಗೆ ಮರಳಿದರು. ಆದರೆ, ಹಲವಾರು ವಿಪತ್ತುಗಳ ಹಿನ್ನೆಲೆಯಲ್ಲಿ ಪರ್ವತಾರೋಹಣವನ್ನು ನೇಪಾಳ ಸರಕಾರ ಅವಧಿಗೆ ಮೊದಲೇ ನಿಲ್ಲಿಸಿತ್ತು.

2016ರಲ್ಲಿ ಅವರು ಎವರೆಸ್ಟ್ ತುದಿಯಿಂದ ಕೇವಲ 200 ಮೀಟರ್ ದೂರದಲ್ಲಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಅವರು ವಾಪಸಾಗಬೇಕಾಯಿತು.

ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಎರಡೂ ಕಾಲುಗಳಿಲ್ಲದ ಇನ್ನೋರ್ವ ಆರೋಹಿ ಎಂದರೆ ನ್ಯೂಝಿಲ್ಯಾಂಡ್‌ನ ಮಾರ್ಕ್ ಇಂಗ್ಲಿಸ್.

ನೇಪಾಳದ ವಿವಾದಾಸ್ಪದ ನಿಷೇಧ

ವಿಶ್ವದ ಅತ್ಯುನ್ನತ ಶಿಖರವನ್ನು ಜಯಿಸುವ ಕ್ಸಿಯಾ ಅವರ ಕನಸನ್ನು ನೇಪಾಳ ಸರಕಾರ ಕಳೆದ ವರ್ಷ ಬಹುತೇಕ ನುಚ್ಚುನೂರುಗೊಳಿಸಿತ್ತು. ಎರಡೂ ಕಾಲುಗಳನ್ನು ಹೊಂದಿರದವರು ಮತ್ತು ಅಂಧರು ಎವರೆಸ್ಟ್ ಶಿಖರವನ್ನು ಏರುವುದನ್ನು ಅದು ನಿಷೇಧಿಸಿತ್ತು.

ಈ ಆದೇಶವನ್ನು ನೇಪಾಳದ ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ರದ್ದುಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ. ಸರಕಾರದ ಈ ನಿಯಮವು ವಿಕಲಚೇತನರ ವಿರುದ್ಧ ತಾರತಮ್ಯ ಮಾಡುತ್ತದೆ ಎಂದು ನ್ಯಾಯಾಲಯ ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News