ಹೊರಳುದಾರಿಯಲ್ಲಿ ಕರ್ನಾಟಕ?

Update: 2018-05-16 18:30 GMT

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಚುನಾವಣಾ ಭರವಸೆಗಳಲ್ಲಿ ಒಂದನ್ನಾದರೂ ಈಡೇರಿಸದ ಅದೇ ಪಕ್ಷಕ್ಕೆ ಕರ್ನಾಟಕದ ಮತದಾರರು ರಾಜ್ಯ ಅಸೆಂಬ್ಲಿಯಲ್ಲಿ ಇಷ್ಟೊಂದು ಸ್ಥಾನಗಳನ್ನು ದೊರಕಿಸಿಕೊಟ್ಟಿರುವುದನ್ನು ಕಂಡು ನಿಜಕ್ಕೂ ಆಶ್ಚರ್ಯವಾಗುತ್ತದೆ. ಹಾಗಾದರೆ ಕುಂಠಿತವಾಗಿರುವ ಅಭಿವೃದ್ಧಿ, ಮರೀಚಿಕೆಯಾದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ಸ್ವಪ್ನಲೋಕಕ್ಕೆ ಸೀಮಿತವಾದ ‘ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿ’, ತಾಂಡವವಾಡುತ್ತಿರುವ ನಿರುದ್ಯೋಗ, ಇನ್ನೂ ಕತ್ತಲ ಗರ್ಭದಲ್ಲೇ ಉಳಿದ ಕಪ್ಪುಹಣ, ಹುಸಿಯಾದ ನ ಖಾವುಂಗಾ ನ ಖಾನೆ ದೂಂಗ, ಹೆಚ್ಚಿದ ಭ್ರಷ್ಟಾಚಾರ, ಇಳಿಯುವ ಬದಲು ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆ, ಹೆಚ್ಚುತ್ತಿರುವ ಹಣದುಬ್ಬರ, ಸುಳ್ಳಾಗಿರುವ ಡಾಲರ್ ರೂಪಾಯಿ ವಿನಿಮಯ ಬೆಲೆ ಕುರಿತ ಭರವಸೆ ಇತ್ಯಾದಿಗಳು ನಿರ್ಣಾಯಕ ವಿಷಯಗಳೆಂದು ಮತದಾರರಿಗೆ ಅನಿಸಲಿಲ್ಲವೇ? ನೂರಕ್ಕೂ ಅಧಿಕ ಅಮಾಯಕರ ಬಲಿ ತೆಗೆದುಕೊಂಡು ಜನಸಾಮಾನ್ಯರೆಲ್ಲರನ್ನೂ ಅಪಾರ ಸಂಕಷ್ಟಕ್ಕೆ ದೂಡಿದ ನೋಟು ರದ್ದತಿ ಮತ್ತು ಜಿಎಸ್‌ಟಿಯ ಮೂರ್ಖತನ, ನಕಲಿ ನೋಟುಗಳ ಹಾವಳಿ ಮುಂದುವರಿದಿರುವುದು, ಉಗ್ರರ ದಾಳಿಗಳು ಮೊದಲಿಗಿಂತಲೂ ಹೆಚ್ಚೇ ಆಗಿರುವುದು ಮುಖ್ಯ ಎನಿಸಲಿಲ್ಲವೇ?

ಇವರ ಆಳ್ವಿಕೆಯಡಿ ಇಡೀ ದೇಶದಲ್ಲಿ ನಡೆದ ಅಖ್ಲಾಕ್, ವೇಮುಲ, ಜುನೈದ್, ದಾಭೋಲ್ಕರ್, ಪನ್ಸಾರೆ ಮೊದಲಾದ ಸಾಲುಸಾಲು ದ್ವೇಷದ ಹತ್ಯೆಗಳು ನೆನಪಿನಾಳದಿಂದ ಕೊಚ್ಚಿಹೋದುವೇ? ಕರುನಾಡಿನ ಮಕ್ಕಳಾದ ಕಲಬುರ್ಗಿ, ಗೌರಿಯರ ಅಮಾನುಷ ಕೊಲೆಗಳು ಮರೆತುಹೋದುವೇ? ಹಾಗಾದರೆ ಮತದಾರರಿಗೆ ಕೇವಲ ಧರ್ಮವೊಂದೇ ಮುಖ್ಯವಾಯಿತೇ? ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಸುಳ್ಳನ್ನು ನಿಜವೆಂದು ನಂಬಿದರೇ? ಹಿಂದೂ ಗೆದ್ದರೆ ಮಾತ್ರ ದೇಶ ಗೆಲ್ಲುತ್ತದೆ; ಧರ್ಮ ಉಳಿಯುತ್ತದೆ ಎಂದು ಮನೆಮನೆಗೆ ಬಂದು ಹೇಳಿದ ಸಟೆಯನ್ನು ನಂಬಿದರೇ? ಇಂತಹ ತೀವ್ರ ಧ್ರುವೀಕರಣದ ತಂತ್ರ ಕೆಲವೊಂದು ಕ್ಷೇತ್ರಗಳಲ್ಲಿ ಸಫಲವಾಯಿತೇ?

ಅಥವಾ ಕೆಲವೆಡೆಗಳಲ್ಲಿ ಯಾರೂ ಊಹಿಸದೆ ಇದ್ದ ಆಡಳಿತ ವಿರೋಧಿ ಅಲೆ ಎದ್ದಿತೇ?

2004ರಿಂದೀಚೆಗಿನ ಫಲಿತಾಂಶಗಳನ್ನು ನೋಡಿ:
                  ಕಾಂಗ್ರೆಸ್                         ಬಿಜೆಪಿ                                ಜೆಡಿಎಸ್
2004         65 (35.27)                 79 (28.33)                        58 (20.77)
2008         80 (35.13)                 110 (33.86)                      28 (19.44)
2013         122 (36.6)                 40 (19.9)                          40 (20.2)
2018         78 (38)                      103 (36.2)                        38 (18.4)
(ಮೂಲ: ವಿಕಿಪಿಡಿಯಾ ಮತ್ತು ಪತ್ರಿಕಾ ವರದಿಗಳು)
 

ಅಥವಾ ಮತದಾರರು ನಟಸಾರ್ವಭೌಮ, ವಾಕ್ಚತುರ ಮೋದಿಯ ಕೊನೆಗಳಿಗೆಯ ಭಾಷಣಗಳಿಗೆ ತೇಲಿಹೋದರೇ? ರಾಜಾಡಳಿತದಿಂದ ಸ್ವತಂತ್ರರಾಗಿ ಜನಾಡಳಿತವನ್ನು ಆರಿಸಿ ವರ್ಷ ಎಪ್ಪತ್ತು ದಾಟಿದರೂ ರಾಜರನ್ನು ಹಾಗೂ ರಾಜ ಕುಟುಂಬಗಳನ್ನು ಆರಾಧಿಸುವ ಆ ಗುಂಗಿನಿಂದ ನಾವಿನ್ನೂ ಹೊರಬಂದಿರುವ ಹಾಗಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಮೈಸೂರು ದಸರಾ. ಇದರ ಮುಂದಿನ ಹಂತ ಸಿನೆಮಾ ಹೀರೊಗಳ ಆರಾಧನೆ. ಭಾರತೀಯರಲ್ಲಿರುವ ಈ ಹೀರೊ ಆರಾಧನೆಯ ದೌರ್ಬಲ್ಯವನ್ನು ಸರಿಯಾಗಿ ಗುರುತಿಸಿರುವ ಆರೆಸ್ಸೆಸ್, ಹೀರೊಗಳ ಡಯಲಾಗ್ ಥರ ಇರುವ ಭಾಷಣಗಳಿಗೆ - ಅದರಲ್ಲಿ ಸುಳ್ಳೇ ವಿಜೃಂಭಿಸಿದರೂ - ಜನ ಮರುಳಾಗುತ್ತಾರೆ ಎಂಬ ಸತ್ಯವನ್ನು ಅರಿತಿದೆ. ಅದೇ ತಂತ್ರವನ್ನು ಬಳಸಿ ಜನರಿಗೆ ಮಂಕುಬೂದಿ ಎರಚಿ ದಿಲ್ಲಿಯನ್ನು ತನ್ನದಾಗಿಸಿಕೊಂಡಿದೆ ಮಾತ್ರವಲ್ಲದೆ ರಾಜ್ಯಗಳನ್ನೂ ಒಂದೊಂದಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಈಗ ಕರ್ನಾಟಕದಲ್ಲೂ ಇದೇ ತಂತ್ರ ಫಲಿಸಿತೇ? ಕರ್ನಾಟಕದ ಮೂಲಕ ದಕ್ಷಿಣ ಭಾರತಕ್ಕೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವ ಆರೆಸ್ಸೆಸಿಗರಂತೂ ಒಳಗೊಳಗೇ ಅಬ್ ಹಿಂದೂ ರಾಷ್ಟ್ರ ದೂರ್ ನಹೀ ಹೈ ಎಂಬ ಮಂತ್ರವನ್ನು ಜಪಿಸುತ್ತಿರಬಹುದು!

ಯಾರು 1930ರ ದಶಕದ ಇಟಲಿ, ಜರ್ಮನಿಗಳಲ್ಲಿ ಫ್ಯಾಶಿಸ್ಟರು ಮತ್ತು ನಾಝಿಗಳು ನಡೆಸಿದ ಅನ್ಯ ಧರ್ಮೀಯರ ಘೋರ ನರಮೇಧಗಳು, ಬೀದಿ ಪುಂಡಾಟಿಕೆಗಳು, ಸಾಂಸ್ಕೃತಿಕ ದಬ್ಬಾಳಿಕೆಗಳೇ ಮುಂತಾದ ಭಯಾನಕ ಘಟನಾವಳಿಗಳ ಬಗ್ಗೆ ತಿಳಿದುಕೊಂಡಿಲ್ಲವೋ ಅಂಥವರಿಗೆ ಇಟಲಿ, ಜರ್ಮನಿಗಳ ಅಂದಿನ ಪರಿಸ್ಥಿತಿಗೂ ಭಾರತದ ಇಂದಿನ ಪರಿಸ್ಥಿತಿಗೂ ಹೆಚ್ಚೇನೂ ವ್ಯತ್ಯಾಸಗಳಿಲ್ಲದಿರುವ ವಿಷಯ ಖಂಡಿತಾ ಗೋಚರಿಸದು. ಆದುದರಿಂದಲೇ ದಾರ್ಶನಿಕ ಜಾರ್ಜ್ ಸಂತಾಯನ ಸಾರಿ ಹೇಳಿದ್ದಾನೆ ‘‘ಇತಿಹಾಸವನ್ನು ಸ್ಮರಿಸಲಾಗದವರು ಅದರ ಪುನರಾವರ್ತನೆಗೆ ಪಕ್ಕಾಗುತ್ತಾರೆ’’ (Those who cannot remember the past are condemned to repeat it). ಬಿಜೆಪಿ ಆಡಳಿತದ ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ ಮುಂತಾದೆಡೆ ಈ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇದೀಗ ಈ ಅಪರಿಹಾರ್ಯ ವಿದ್ಯಮಾನಗಳ ಜಗನ್ನಾಥ ರಥ ಕರ್ನಾಟಕಕ್ಕೂ ಉರುಳುರುಳಿ ಬರಲಿದೆಯೇ? ಎಲ್ಲರ ಚಿತ್ತ ರಾಜಭವನದತ್ತ.

Writer - -ಸುರೇಶ್ ಭಟ್, ಬಾಕ್ರಬೈಲ್

contributor

Editor - -ಸುರೇಶ್ ಭಟ್, ಬಾಕ್ರಬೈಲ್

contributor

Similar News