×
Ad

ಲಂಚ ಆರೋಪ ಮಾಡಿದ ತಿರುಮಲ ಮುಖ್ಯ ಅರ್ಚಕ ಕಡ್ಡಾಯ ನಿವೃತ್ತಿ

Update: 2018-05-17 09:00 IST

ತಿರುಪತಿ, ಮೇ 17: ದೇಶದ ಅತಿಶ್ರೀಮಂತ ದೇವಾಲಯದ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಪಾದಿಸಿದ ಬೆನ್ನಲ್ಲೇ, ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಕ್ಷೇತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಮುಖ್ಯ ಅರ್ಚಕ ಎ.ವಿ.ರಮಣ ದೀಕ್ಷಿತುಲು ಅವರ ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿದೆ.

ಹೊಸದಾಗಿ ರಚನೆಯಾಗಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಆಡಳಿತ ಮಂಡಳಿಯ ಮೊದಲ ಸಭೆಯಲ್ಲೇ ಅವಿರೋಧವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಗುಲದಲ್ಲಿ 65 ವರ್ಷ ಮೀರಿದ ಎಲ್ಲ ಅರ್ಚಕರೂ ನಿವೃತ್ತಿಯಾಗುವಂತೆ ಸೂಚಿಸಿದೆ.

ಈ ಸೂಚನೆಯ ಹಿನ್ನೆಲೆಯಲ್ಲಿ ಮುಖ್ಯ ಅರ್ಚಕ ರಮಣ ದೀಕ್ಷಿತುಲು, ಇತರ ಮೂವರು ಅರ್ಚಕರಾದ ನರಸಿಂಹ ದೀಕ್ಷಿತುಲು, ಶ್ರೀನಿವಾಸಮೂರ್ತಿ ದೀಕ್ಷಿತುಲು ಮತ್ತು ನಾರಾಯಣ ದೀಕ್ಷಿತುಲು ಸೇವೆಯಿಂದ ನಿವೃತ್ತರಾಗಲಿದ್ದಾರೆ ಎಂದು ಟಿಟಿಡಿ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ಪುಟ್ಟ ಸುಧಾಕರ ಯಾದವ್ ಪ್ರಕಟಿಸಿದ್ದಾರೆ.

ಈ ನಾಲ್ವರು ಅರ್ಚಕರ ನಿವೃತ್ತಿ ಹಿನ್ನೆಲೆಯಲ್ಲಿ ವಂಶಪಾರಂಪರ್ಯವಾಗಿ ದೇವಾಲಯದ ಪೂಜೆ ನಿರ್ವಹಿಸುತ್ತಾ ಬಂದ ಕುಟುಂಬಗಳಿಂದ ನಾಲ್ಕು ಹೊಸ ಅರ್ಚಕರನ್ನು ಆಡಳಿತ ಮಂಡಳಿ ನೇಮಕ ಮಾಡಿದೆ. ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ, ದೇವಾಲಯದ ಹಣ ದುರುಪಯೋಗ ಮಾಡಿಕೊಂಡು, ದೇವಸ್ಥಾನದ ಪಾವಿತ್ರ್ಯವನ್ನು ಹಾಳುಗೆಡವುತ್ತಿದೆ ಎಂದು ರಮಣ ದೀಕ್ಷಿತುಲು ಮಂಗಳವಾರ ಚೆನ್ನೈನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಆಪಾದಿಸಿದ್ದರು. ದೇವಸ್ಥಾನ ಸ್ವೀಕರಿಸಿದ ದೇಣಿಗೆ ಮತ್ತು ಆಗಿರುವ ಖರ್ಚಿನ ಬಗ್ಗೆ ಮುಕ್ತ ಪರಿಶೋಧನೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News