ಫ್ಲೈಓವರ್ ನಿರ್ಮಾಣ ಸಂಸ್ಥೆಗೆ ಎಚ್ಚರಿಕೆ ವಹಿಸುವಂತೆ 5 ಪತ್ರಗಳನ್ನು ರವಾನಿಸಿದ್ದ ಪೊಲೀಸ್ ಇಲಾಖೆ

Update: 2018-05-17 11:25 GMT

ವಾರಣಾಸಿ,ಮೇ.17 : ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ನ  ಒಂದು ಭಾಗ ಕುಸಿದು ಬಿದ್ದ ಪರಿಣಾಮ 18 ಜನರು ಮೃತಪಟ್ಟ ಘಟನೆಯ ನಂತರದ ಬೆಳವಣಿಗೆಯೊಂದರಲ್ಲಿ ಇದೀಗ ಉತ್ತರ ಪ್ರದೇಶ ಪೊಲೀಸರು ಯುಪಿ ರಾಜ್ಯ ಬ್ರಿಡ್ಜ್ ಕಾರ್ಪೊರೇಶನ್ ಗೆ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಕನಿಷ್ಠ ಐದು ಪತ್ರಗಳನ್ನು ಬರೆದು ನಿರ್ಮಾಣ ಕಾರ್ಯದ  ವೇಳೆ ಸಾರಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ದೂರಿದ್ದಾಗಿ ಹಾಗೂ ಈ ಬಗ್ಗೆ ಈ ವರ್ಷದ ಫೆಬ್ರವರಿಯಲ್ಲಿ ಎಫ್‍ಐಆರ್ ಕೂಡ ದಾಖಲಿಸಿದ್ದಾಗಿ ಐಜಿ ದೀಪಕ್  ರತನ್ ಬಹಿರಂಗ ಪಡಿಸಿದ್ದಾರೆ.

ಸಂಭಾವ್ಯ ಅಪಾಯದ ಬಗ್ಗೆ ಸತತ ಎಚ್ಚರಿಕೆ ನೀಡಿದ್ದರೂ ಕಾರ್ಪೊರೇಶನ್ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ. ಯುಪಿ ಬಿಡ್ಜ್ ಕಾರ್ಪೊರೇಶನ್ ವಿರುದ್ಧ ಸಿಗ್ರಾ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು  ಎಫ್‍ಐಆರ್ ದಾಖಲಿಸಲಾಗಿತ್ತಲ್ಲದೆ ಈ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲತೆ ಹಾಗೂ ಅಪಾಯ ಸೃಷ್ಟಿಸಿದೆ ಎಂದು ದೂರಲಾಗಿತ್ತು.

ಕಾಮಗಾರಿ ಪ್ರಗತಿ ಹಂತದಲ್ಲಿರುವ ಈ ಫ್ಲೈಓವರ್ ನ ನೇತಾಡುತ್ತಿರುವ ಕಬ್ಬಿಣದ ಬೀಮುಗಳು ಕೆಳಗಡೆ ಸಾಗುತ್ತಿರುವ ವಾಹನಗಳಿಗೆ ಅಪಾಯಕಾರಿಯಾಗಿತ್ತೆಂದು ಎಫ್‍ಐಆರ್ ನಲ್ಲಿ ದೂರಲಾಗಿದೆ.

ಫ್ಲೈಓವರ್ ಕುಸಿತದ ನಂತರ ಇದೀಗ ಕಾರ್ಪೊರೇಶನ್ ಅಧಿಕಾರಿಗಳ ವಿರುದ್ಧ, ಮೇಲ್ವಿಚಾರಕ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಇತರ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರ್ಪೊರೇಶನ್ ನ  ಮುಖ್ಯ ಯೋಜನಾ ಮ್ಯಾನೇಜರ್ ಎಚ್ ಸಿ ತಿವಾರಿ, ಯೋಜನಾ ಮ್ಯಾನೇಜರ್ ಕೆ ಆರ್ ಸುದನ್, ಸಹಾಯಕ ಇಂಜಿನಿಯರ್ ರಾಜೇಶ್ ಸಿಂಗ್ ಹಾಗೂ ಇಂಜಿನಿಯರ್ ಲಾಲ್ ಚಂದ್ ಅವರನ್ನು ವಜಾಗೊಳಿಸಲಾಗಿದೆ.

ಆದರೆ ತಾವು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಫ್ಲೈಓವರ್ ನಿರ್ಮಾಣದ ವೇಳೆ ಸಾರಿಗೆ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾಗಿ ಬ್ರಿಡ್ಜ್  ಕಾರ್ಪೊರೇಶನ್ ಆಡಳಿತ ನಿರ್ದೇಶಕ  ರಾಜನ್ ಮಿತ್ತಲ್ ಹೇಳಿಕೊಂಡಿದ್ದಾರೆ. ನಿರ್ಮಾಣ ಸ್ಥಳದಲ್ಲಿದ್ದ ಬೀದಿ ಬದಿ ವ್ಯಾಪಾರಿಗಳನ್ನೂ ತೆರವುಗೊಳಿಸಲು ವಿನಂತಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News