ಚೀನಾ: ಉಯ್ಘರ್ ಮುಸ್ಲಿಮರ ಮೇಲೆ ನಿಯಂತ್ರಾಣಕ್ಕಾಗಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ‘ಮನೆ ವಾಸ್ತವ್ಯ’

Update: 2018-05-17 17:26 GMT

ಬೀಜಿಂಗ್, ಮೇ 17: ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಇರುವ ಮುಸ್ಲಿಮರ ಕುರಿತಂತೆ ಚೀನಾ ಅನುಸರಿಸುತ್ತಿರುವ ಕಠಿಣ ನಿಲುವು ರಮಝಾನ್ ತಿಂಗಳ ಅವಧಿಯಲ್ಲಿ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ವ್ಯಕ್ತವಾಗಿವೆ.

ಈ ಪ್ರಾಂತದಲ್ಲಿನ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಗಳ ಮೇಲೆ ಸರಕಾರ ಇಡುತ್ತಿರುವ ನಿಗಾ ‘ಆಕ್ರಮಣ’ ಎನ್ನುವಷ್ಟರ ಮಟ್ಟಿಗೆ ಹೋಗಿವೆ ಎಂದು ಒಂದು ವರದಿ ಹೇಳಿದರೆ, ಹಲವು ಸಾವಿರ ಮುಸ್ಲಿಮರನ್ನು ‘ಮರುಶಿಕ್ಷಣ ಶಿಬಿರ’ಗಳಲ್ಲಿ ಕೂಡಿ ಹಾಕಲಾಗಿದೆ ಎಂದು ಇನ್ನೊಂದು ವರದಿ ಹೇಳಿದೆ.

 ‘ಸಾಮಾಜಿಕ ಸ್ಥಿರತೆಯನ್ನು ರಕ್ಷಿಸುವ’ ಉದ್ದೇಶದ ಪ್ರಸಕ್ತ ಕಾರ್ಯಕ್ರಮವೊಂದರ ಪ್ರಕಾರ, ಚೀನಾ ಕಮ್ಯುನಿಸ್ಟ್ ಪಕ್ಷದ ಸಾವಿರಾರು ಕಾರ್ಯಕರ್ತರಿಗೆ ಕ್ಸಿನ್‌ಜಿಯಾಂಗ್ ಉಯ್ಘರ್ ಸ್ವಾಯತ್ತ ಪ್ರದೇಶ (ಎಕ್ಸ್‌ಯುಎಆರ್)ದಲ್ಲಿರುವ ಮುಸ್ಲಿಮ್ ಉಯ್ಘರ್ ಕುಟುಂಬಗಳ ಜೊತೆ ‘ಮನೆ ವಾಸ್ತವ್ಯ’ ಮಾಡುವ ಹೊಣೆಯನ್ನು ವಹಿಸಲಾಗಿದೆ.

  ‘‘ಈ ಮನೆ ವಾಸ್ತವ್ಯಗಳ ಸಂದರ್ಭದಲ್ಲಿ, ಈ ಕುಟುಂಬಗಳು ತಮ್ಮ ಬದುಕು ಮತ್ತು ರಾಜಕೀಯ ನಿಲುವುಗಳನ್ನು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಗೆ ತಿಳಿಸಬೇಕಾಗುತ್ತದೆ ಹಾಗೂ ಅವರಿಗೆ ರಾಜಕೀಯ ಸಿದ್ಧಾಂತಗಳ ಮರುಬೋಧನೆ ಮಾಡಲಾಗುತ್ತದೆ’’ ಎಂದು ಈ ವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ‘ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ.

 ‘‘ಕ್ಸಿನ್‌ಜಿಯಾಂಗ್ ಪ್ರಾಂತದಾದ್ಯಂತ ಇರುವ ಮುಸ್ಲಿಮ್ ಕುಟುಂಬಗಳು ಈಗ ತಮ್ಮದೇ ಮನೆಗಳಲ್ಲಿ ಅಕ್ಷರಶಃ ಸರಕಾರದ ಕಣ್ಗಾವಲಿನಲ್ಲಿ ತಿನ್ನುತ್ತಿವೆ ಹಾಗೂ ಮಲಗುತ್ತಿವೆ. ಈ ಅಭಿಯಾನವು ಕ್ಸಿನ್‌ಜಿಯಾಂಗ್‌ನಲ್ಲಿನ ದೈನಂದಿನ ಬದುಕಿನ ಮೇಲಿನ ದಾಳಿಯಾಗಿದೆ’’ ಎಂದು ವಾಚ್‌ನ ಚೀನಾ ಸಂಶೋಧಕಿ ಮಾಯಾ ವಾಂಗ್ ಹೇಳಿದ್ದಾರೆ.

 ‘‘ನಿಯಮಿತವಾಗಿ ಜನರನ್ನು ಭೇಟಿಯಾಗಿ ಸಮೀಕ್ಷೆ ಮಾಡುವುದಕ್ಕಾಗಿ, ಕ್ಸಿನ್‌ಜಿಯಾಂಗ್ ಅಧಿಕಾರಿಗಳು 2014ರಿಂದ ಸರಕಾರಿ ಸಂಸ್ಥೆಗಳ 2 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಮುಸ್ಲಿಮರ ಮನೆಗಳಿಗೆ ಕಳುಹಿಸಿದ್ದಾರೆ. ಸಾಮಾಜಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ’’ ಎಂದು ಹ್ಯೂಮನ್ ರೈಟ್ಸ್ ವಾಚ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News