ಉತ್ತರ ಕೊರಿಯದ ಸೇನಾಧಿಕಾರಿ ದಕ್ಷಿಣಕ್ಕೆ ಪಲಾಯನ

Update: 2018-05-19 17:01 GMT

ಸಿಯೋಲ್ (ದಕ್ಷಿಣ ಕೊರಿಯ), ಮೇ 19: ಉತ್ತರ ಕೊರಿಯದ ಸೇನಾಧಿಕಾರಿಯೊಬ್ಬರು ಓರ್ವ ನಾಗರಿಕನೊಂದಿಗೆ ಹಳದಿ ಸಮುದ್ರದ ಮೂಲಕ ಶನಿವಾರ ದಕ್ಷಿಣ ಕೊರಿಯಕ್ಕೆ ಪಲಾಯನಗೈದಿದ್ದಾರೆ.

‘‘ಕೊರಿಯಗಳ ನಡುವಿನ ಗಡಿ ಸಮೀಪದ ಬೇಂಗ್‌ಯಾಂಗ್ ದ್ವೀಪದ ಉತ್ತರದ ಸಮುದ್ರದಲ್ಲಿ ಸಣ್ಣ ದೋಣಿಯೊಂದನ್ನು ಪತ್ತೆಹಚ್ಚಲಾಯಿತು. ಮೇಜರ್ ದರ್ಜೆಯ ಹುದ್ದೆ ಹೊಂದಿದ್ದ ಸೇನಾಧಿಕಾರಿ ಮತ್ತು ಓರ್ವ ನಾಗರಿಕ ಅದರಲ್ಲಿದ್ದರು’’ ಎಂದು ಮೂಲವೊಂದನ್ನು ಉಲ್ಲೇಖಿಸಿ ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಅವರು ದಕ್ಷಿಣ ಕೊರಿಯಕ್ಕೆ ಪಲಾಯನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು’’ ಎಂದು ಯೊನ್‌ಹಾಪ್ ತಿಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ ಕೊರಿಯ ತಟರಕ್ಷಣಾ ಪಡೆ ಅಧಿಕಾರಿಯೊಬ್ಬರು, ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದರು. 2000ದ ಬಳಿಕ ಉತ್ತರ ಕೊರಿಯದ ಸೈನಿಕರು ಪಕ್ಷಾಂತರ ಮಾಡಿದ 14ನೆ ಪ್ರಕರಣ ಇದಾಗಿದೆ.

ಶೃಂಗಸಭೆಯ ಬಳಿಕ ಮೊದಲ ಪಕ್ಷಾಂತರ

ಕಳೆದ ತಿಂಗಳು ಕೊರಿಯ ಗಡಿಯಲ್ಲಿ ಉಭಯ ಕೊರಿಯಗಳ ನಾಯಕರ ನಡುವೆ ಶೃಂಗಸಭೆ ನಡೆದ ಬಳಿಕ, ಉತ್ತರ ಕೊರಿಯದ ಕಡೆಯಿಂದ ಆಗುತ್ತಿರುವ ಪ್ರಥಮ ಪಕ್ಷಾಂತರ ಇದಾಗಿದೆ.

ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸುವ ಹಾಗೂ ಈ ವಲಯದಲ್ಲಿ ಶಾಶ್ವತ ಶಾಂತಿ ಕಾಪಾಡುವ ಇಚ್ಛೆಯನ್ನು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News