ರ್ಯಾಂಬೋ-2: ಮನತುಂಬ ತುಂಬೋ ‘ರ್ಯಾಂಬೋ’

Update: 2018-05-19 18:32 GMT

ರ್ಯಾಂಬೋ ಹೆಸರಿನ ಚಿತ್ರದ ಮೂಲಕ ನಾಯಕನಾಗಿ ಯಶಸ್ವಿಯಾದವರು ಶರಣ್. ಬಹುತೇಕ ಅದೇ ತಾರಾಗಣದ ಚಿತ್ರ ಎನ್ನುವುದನ್ನು ಹೊರತುಪಡಿಸಿ ಆ ಚಿತ್ರಕ್ಕೂ ‘ರ್ಯಾಂಬೋ 2’ ಎಂಬ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.

 ಚಿತ್ರದ ನಾಯಕ ಕೃಷ್ಣ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆತನಿಗೆ ಬಾಲ್ಯದಿಂದಲೂ ಎಲ್ಲವನ್ನೂ ವಿಭಿನ್ನವಾಗಿ ಮಾಡುವ ಆಸೆ. ಈ ವೆರೈಟಿಯ ಹುಚ್ಚಿನಲ್ಲಿ ಆತ ತಾನು ಮದುವೆಯಾಗುವ ಹುಡುಗಿಯೂ ತುಂಬ ವೆರೈಟಿಯಾಗಿರಬೇಕೆಂದು ಬಯಸುತ್ತಾನೆ. ಈ ಸಂದರ್ಭದಲ್ಲಿ ಕೃಷ್ಣನಿಗೆ ಮಯೂರಿ ಎಂಬ ಹುಡುಗಿಯ ಪರಿಚಯವಾಗುತ್ತದೆ. ಆದರೆ ಆಕೆ ಹುಡುಗರನ್ನು ಪ್ರೀತಿಸುವುದಕ್ಕಿಂತ ಅವರಿಂದ ಖರ್ಚು ಮಾಡಿಸಿ ಕೈ ಕೊಡುವ ಅಭ್ಯಾಸ ಹೊಂದಿದವಳಾಗಿರುತ್ತಾಳೆ. ಅವರಿಬ್ಬರೂ ಇಷ್ಟಪಟ್ಟು ಒಂದು ಲಾಂಗ್‌ಡ್ರೈವ್‌ಗೆ ಯೋಜನೆ ಹಾಕುತ್ತಾರೆ. ಹಾಗೆ ಶುರುವಾದ ಪ್ರಯಾಣ ಮಧ್ಯಂತರದ ಹೊತ್ತಿಗೆ ಒಂದು ವಿಭಿನ್ನವಾದ ತಿರುವು ಪಡೆದುಕೊಳ್ಳುತ್ತದೆ. ಆ ತಿರುವು ಯಾಕಾಯಿತು ಮತ್ತು ಅದಕ್ಕೆ ಪರಿಹಾರವೇನು ಎನ್ನುವುದನ್ನು ಚಿತ್ರದ ಕೊನೆಯಲ್ಲಿ ಹೇಳಲಾಗಿದೆ. ಕಥಾನಾಯಕ ಕೃಷ್ಣನಾಗಿ ಶರಣ್ ತಮ್ಮ ಎಂದಿನ ಲವಲವಿಕೆಯ ಅಭಿನಯ ನೀಡಿದ್ದಾರೆ. ಮಯೂರಿಯಾಗಿ ಆಶಿಕಾ ರಂಗನಾಥ್ ಹಿಂದಿನ ಚಿತ್ರಗಳಿಗಿಂತ ಹೆಚ್ಚು ಆಕರ್ಷಿಸುತ್ತಾರೆ. ಅದಕ್ಕೆ ಕಾರಣ ಇಲ್ಲಿಯೂ ಕಾಲೇಜು ಹುಡುಗಿಯಾಗಿದ್ದರೂ ಆ ಇಮೇಜ್‌ನಿಂದ ಹೊರಬರುವಂಥ ಗ್ಲಾಮರಸ್ ದೃಶ್ಯಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಡ್ಯುಯೆಟ್ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ಕಾರಣ ಜೋಡಿಯ ಹಾಡುಗಳನ್ನು ಪ್ರೇಕ್ಷಕರು ಸಂಭ್ರಮದಿಂದ ಸ್ವೀಕರಿಸುತ್ತಿದ್ದಾರೆ. ಜಾನಪದ ಹಾಡುಗಳ ಟ್ಯೂನ್ ಸ್ಫೂರ್ತಿಯಾಗಿರಿಸಿಕೊಂಡು ಅರ್ಜುನ್ ಜನ್ಯ ನೀಡಿರುವ ಸಂಗೀತವೂ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ದ್ವಿತೀಯಾರ್ಧದ ಮುಕ್ಕಾಲುಭಾಗವೂ ರಸ್ತೆಯಲ್ಲೇ ನಡೆಯುತ್ತದೆ.

ಹಿಂದಿಯ ರೋಡ್, ಕನ್ನಡದ ಏಕಾಂಗಿ ಚಿತ್ರಗಳು ನೆನಪಿನಲ್ಲಿ ಹಾದು ಹೋಗುತ್ತವೆ. ಅಲ್ಲಿ ಮನೋಜ್ ಬಾಜಪೇಯಿ, ಪ್ರಕಾಶ್ ರೈ ಇದ್ದ ಜಾಗದಲ್ಲಿ ಇಲ್ಲಿ ರವಿಶಂಕರ್ ಇದ್ದಾರೆ. ಇಲ್ಲಿ ಖಳನಿಗೊಂದು ಮಾನವೀಯ ಮುಖವಿದೆ. ಅದನ್ನು ತೋರಿಸುವಲ್ಲಿ ರವಿಶಂಕರ್ ಗೆದ್ದಿದ್ದಾರೆ. ಆದರೆ ಶರಣ್ ಚಿತ್ರದುದ್ದಕ್ಕೂ ಹಾಸ್ಯವನ್ನು ನಿರೀಕ್ಷಿಸುವವರಿಗೆ ಕತೆಯಲ್ಲಿ ರವಿಶಂಕರ್ ಮೂಲಕ ಸೆಂಟಿಮೆಂಟ್ ಸಂದೇಶಗಳ ಸೃಷ್ಟಿಯಾಗುವುದನ್ನು ಸಹಿಸುವುದು ತುಸು ಕಷ್ಟವೇ. ಆದರೆ ಅದಾಗಲೇ ತಂದೆಯಾಗಿ ತಬಲಾ ನಾಣಿ, ಸ್ನೇಹಿತನಾಗಿ ಕುರಿ ಪ್ರತಾಪ್, ದೇವನಹಳ್ಳಿ ಜಗ್ಗ ಎಂಬ ಡಿಜೆಯಾಗಿ ಚಿಕ್ಕಣ್ಣ ಇನ್ನಿಲ್ಲದಷ್ಟು ಹಾಸ್ಯ ಸನ್ನಿವೇಶಗಳನ್ನು ನೀಡಿರುತ್ತಾರೆ. ಇರುವುದರಲ್ಲಿ ಸಾಧು ಕೋಕಿಲ ಕುರುಡನ ಪಾತ್ರವೇ ಸ್ವಲ್ಪ ಡಲ್ ಹೊಡೆಯುತ್ತದೆ ಎನ್ನಬಹುದು. ಆದರೆ ಒಟ್ಟು ಮನರಂಜನೆಗೆ ಕೊರತೆಯಿಲ್ಲ ಎನ್ನಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ರವಿಚಂದ್ರನ್ ಶೈಲಿಯಲ್ಲಿ ಹಾಕಲಾದ ಟೈಟಲ್ ಕಾರ್ಡ್ ನಿಂದ ಹಿಡಿದು ಪೂರ್ತಿ ಚಿತ್ರ ಕಲರ್ ಫುಲ್ ಆಗಿ ಗಮನ ಸೆಳೆಯುತ್ತದೆ. ಸಂಭಾಷಣೆಕಾರರಾಗಿ ಹೆಸರು ಮಾಡಿರುವ ಅನಿಲ್ ನಿರ್ದೇಶನದಲ್ಲಿಯೂ ಗಮನ ಸೆಳೆಯುತ್ತಾರೆ. ಸಂಭಾಷಣೆಗಳು ಒಂದಷ್ಟು ದ್ವಂದ್ವಾರ್ಥವನ್ನು ಧ್ವನಿಸುತ್ತಿರುವುದು ಇತ್ತೀಚೆಗೆ ಕನ್ನಡ ಸಿನೆಮಾಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಒಟ್ಟಿನಲ್ಲಿ ಖಂಡಿತವಾಗಿ ಶರಣ್ ಅಭಿಮಾನಿಗಳು ನೋಡಲೇಬೇಕಾದ ಸಿನೆಮಾ.

ನಿರ್ದೇಶನ: ಸುನೀಲ್ ಕುಮಾರ್
ತಾರಾಗಣ: ಶರಣ್, ಆಶಿಕಾ ರಂಗನಾಥ್
ನಿರ್ಮಾಣ: ಶರಣ್,
ಅಟ್ಲಾಂಟ ನಾಗೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News