ಕರ್ನಾಟಕದಲ್ಲಿ ‘ಕುದುರೆ ವ್ಯಾಪಾರ’ದ ಬಿಜೆಪಿ ಪ್ರಯತ್ನದ ಬಗ್ಗೆ ಪ್ರಧಾನಿ ತನಿಖೆ ನಡೆಸಲಿ: ಕಾಂಗ್ರೆಸ್

Update: 2018-05-20 14:02 GMT

ಹೊಸದಿಲ್ಲಿ,ಮೇ 20: ಕರ್ನಾಟಕದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಪ್ರಯತ್ನಿಸಿದ್ದಕ್ಕಾಗಿ ರವಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್,ರಾಜ್ಯ ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸ ಮತಕ್ಕೆ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಲಂಚದ ಆಮಿಷ ಒಡ್ಡಲು ತನ್ನ ಪಕ್ಷದ ನಾಯಕರು ನಡೆಸಿದ್ದ ಪ್ರಯತ್ನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಯನ್ನು ಮುರಿಯಲು ಉಭಯ ಪಕ್ಷಗಳ ಶಾಸಕರಿಗೆ ಬಹಿರಂಗ ಕರೆಗಳನ್ನು ಮಾಡಿ ಲಂಚದ ಆಮಿಷವನ್ನು ಒಡ್ಡಿದ್ದ ತನ್ನ ಪಕ್ಷದ ಶಾಸಕರ ವಿರುದ್ಧ ತನಿಖೆಯನ್ನು ಆರಂಭಿಸುವ ಮೂಲಕ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ತನ್ನ ಬದ್ಧತೆಯನ್ನು ಸಾಬೀತುಗೊಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಶೇರಗಿಲ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ಈ ಹಿಂದೆ ಹೇಳಿರುವಂತೆ ಕೇಂದ್ರ ಸರಕಾರವನ್ನು ಬಿಜೆಪಿಯಿಂದ ಮತ್ತು ದ್ವೇಷ ರಾಜಕಾರಣದಿಂದ ಮುಕ್ತಗೊಳಿಸಲು ಕಾಂಗ್ರೆಸ್ ತನ್ನ ಪಾಲುದಾರ ಪಕ್ಷಗಳೊಂದಿಗೆ ಸೇರಿಕೊಂಡು ಮೈತ್ರಿಕೂಟವನ್ನು ರಚಿಸಲು ಶ್ರಮಿಸಲಿದೆ ಎಂದ ಅವರು,2014ರಲ್ಲಿ ‘ಘರ್ ಘರ್ ಮೋದಿ’ ಘೋಷಣೆಯಿದ್ದರೆ 2019ರಲ್ಲಿ ಅದು ‘ಬೈ ಬೈ ಮೋದಿ’ ಎಂದಾಗುವಂತೆ ಕಾಂಗ್ರೆಸ್ ನೋಡಿಕೊಳ್ಳಲಿದೆ. ಇಂದು ನಾವು ಸ್ನೇಹಿತರನ್ನು ಮಾಡಿಕೊಳ್ಳುತ್ತಿದ್ದರೆ ಎನ್‌ಡಿಎ ಶತ್ರುಗಳನ್ನು ಮಾಡಿಕೊಳ್ಳುತ್ತಿದೆ ಎಂದರು.

ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಸರಕಾರವು ದೇಶದ 10 ಲ.ಕೋ.ರೂ.ಗಳನ್ನು ಲೂಟಿ ಮಾಡಿದೆ ಮತ್ತು ಈ ಲೂಟಿಯ ಹಣವನ್ನು ಕರ್ನಾಟಕದಲ್ಲಿ ಶಾಸಕರನ್ನು ಬೇಟೆಯಾಡಲು ಬಳಸಲಾಗಿತ್ತು ಎಂದು ಆರೋಪಿಸಿದರು.

ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ಇಂಧನ ದರಗಳನ್ನು ಹೆಚ್ಚಿಸಿರಲಿಲ್ಲ ಎನ್ನುವುದನ್ನು ಬೆಟ್ಟು ಮಾಡಿದ ಅವರು,ಪ್ರಧಾನಿಗಳು ಸ್ವಂತ ಹಿತಾಸಕ್ತಿಯಿಂದ ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಬಹುದಾದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವರ್ಷವಿಡೀ ಇಂಧನ ದರಗಳನ್ನೇಕೆ ನಿಯಂತ್ರಿಸಬಾರದು?, ಅಂದರೆ ಇಂಧನ ದರಗಳು ಪ್ರಧಾನಿಯ ಪಾಲಿಗೆ ಕೇವಲ ಚುನಾವಣಾ ಸಾಧನಗಳಾಗಿವೆ ಎಂದರು.

18 ಜೀವಗಳನ್ನು ಬಲಿ ತೆಗದುಕೊಂಡ ವಾರಣಾಸಿ ಸೇತುವೆ ಕುಸಿತ ದುರಂತವನ್ನು ಪ್ರಸ್ತಾಪಿಸಿದ ಶೇರಗಿಲ್,ನೊಂದವರಿಗೆ ಸಾಂತ್ವನ ಹೇಳಲು ಮೋದಿಯವರು ತನ್ನ ಲೋಕಸಭಾ ಕ್ಷೇತ್ರಕ್ಕೆ ಹೋಗದಿರುವುದು ತನಗೆ ಚುನಾವಣಾ ಲಾಭಗಳನ್ನು ನೀಡದ ಯಾವುದೇ ಘಟನೆಯ ಬಗ್ಗೆ ಅವರಿಗೆ ಆಸಕ್ತಿಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News