ಶಾಸನ ಸಭೆ ಪ್ರವೇಶಿಸಿದ ದಿಟ್ಟ ಅಂಬೇಡ್ಕರ್‌ವಾದಿ ಎನ್. ಮಹೇಶ್

Update: 2018-05-21 18:33 GMT

ಕೊಳ್ಳೇಗಾಲ ಮಲೈಮಹದೇಶ್ವರರಂತಹ ಕ್ರಾಂತಿಕಾರಿ ಸಂತರನ್ನು ನೀಡಿದ ಊರು. ಇಲ್ಲಿ ಸಿದ್ಧಪುರುಷರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ ನಡೆದಾಡಿದ್ದಾರೆ. ವಿಶೇಷವಾಗಿ ಇಲ್ಲಿಯ ಅಸ್ಪಶ್ಯರು ಯಾವುದಕ್ಕೂ ಜಗ್ಗದವರು. ಗಂಡೆದೆಯವರು ಅನ್ನುತ್ತಾರಲ್ಲ ಹಾಗೆ. ಅಂತಹ ನಾಡಲ್ಲಿ ಹುಟ್ಟಿದ ಮಹೇಶ್ ಗೊಂದಲದಲ್ಲಿದ್ದ ಶೋಷಿತ ಸಮುದಾಯಗಳ ಚಳವಳಿಯನ್ನು ಬಾಬಾಸಾಹೇಬ್ ಅಂಬೇಡ್ಕರರ ಸಿದ್ಧಾಂತದಡಿಯಲ್ಲಿ ಸಂಘಟಿಸಿದರು. ಅಂಬೇಡ್ಕರರ ಸಂದೇಶಗಳನ್ನು ಜನರ ನಡುವೆ ಬಿತ್ತುತ್ತಾ, ಅವರ ಆದರ್ಶದ ಮಾದರಿಯಲ್ಲೇ ಶೋಷಿತ ಸಮುದಾಯಗಳ ಇತರ ಪೂರ್ವಿಕರ ಸಂದೇಶಗಳನ್ನು ಸಾರುತ್ತಾ... ಒಂದು ಹೊಸ ರಾಜಕೀಯ ಚಳವಳಿಗೆ ನಾಂದಿ ಹಾಡಿದರು.


ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶದ ಶೋಷಿತ ಸಮುದಾಯಗಳ ಬಹುದೊಡ್ಡ ಆದರ್ಶ. ಶೋಷಿತ ಸಮುದಾಯಗಳಿಗೆ ಬದುಕು, ಭರವಸೆ, ಭವಿಷ್ಯ ಪ್ರತಿಯೊಂದನ್ನೂ ನೀಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್. ಆದರೆ ಕರ್ನಾಟಕದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆಗಳು ಒಂದು ಕಾಲದವರೆಗೆ ತನ್ನ ವೇಗವನ್ನು ಪಡೆದುಕೊಂಡಿರಲಿಲ್ಲ. ಅಂಬೇಡ್ಕರ್ ಹೆಸರು ಹೇಳಬೇಕೆಂದರೆ ಅಲ್ಲಿ ಗಾಂಧಿ, ಮಾರ್ಕ್ಸ್, ಲೋಹಿಯಾ ಹೀಗೆ ಯಾರ್ಯಾರೋ ಬರುತ್ತಿದ್ದರು. ಯುವಕರು ಒಂದರ್ಥದಲ್ಲಿ ಅಂಬೇಡ್ಕರ್ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೆ ದಿಕ್ಕೆಟ್ಟಿದ್ದರು. ಹಿರಿಯರೂ ಅಷ್ಟೇ ಯಾವ್ಯಾವುದೋ ಕಾರಣಕ್ಕಾಗಿ ಚಳವಳಿಯನ್ನು ಕೈಚೆಲ್ಲಿದ್ದರು. ಆದರೆ ಅಂತಹ ಸಂದಿಗ್ಧ ಸಂದರ್ಭದಲ್ಲಿ ಅಂಬೇಡ್ಕರ್ ವಾದಕ್ಕೆ ಒಂದು ತಾತ್ವಿಕ ನೆಲೆ ಒದಗಿಸಿ ಅದನ್ನು ಒಂದು ಜನಪ್ರಿಯ ಹಳಿಯ ಹಾದಿಗೆ ತಂದು ಅದರ ಜತೆಗೆ ಫುಲೆ, ಪೆರಿಯಾರ್, ಶಾಹು, ನಾಲ್ವಡಿ ಹೀಗೆ ಶೋಷಿತರ ಅಭ್ಯುದಯಕ್ಕಾಗಿ ದುಡಿದ ಅನೇಕರನ್ನು ಕರುನಾಡಿಗೆ ಪರಿಚಯಿಸಿ ಜನಮಾನಸಗೊಳಿಸಿದ ಕೀರ್ತಿ ಅದು ಅಂಬೇಡ್ಕರ್‌ವಾದಿ, ಬಿಎಸ್ಪಿ ಹಾಲಿ ರಾಜ್ಯಾಧ್ಯಕ್ಷ ಎನ್.ಮಹೇಶ್‌ರವರಿಗೆ ಸಲ್ಲುತ್ತದೆ.

ಎನ್. ಮಹೇಶ್ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಸಮೀಪದ ಶಂಕನಪುರದವರು. ಕೊಳ್ಳೇಗಾಲ ಮಲೈಮಹದೇಶ್ವರರಂತಹ ಕ್ರಾಂತಿಕಾರಿ ಸಂತರನ್ನು ನೀಡಿದ ಊರು. ಇಲ್ಲಿ ಸಿದ್ಧಪುರುಷರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ ನಡೆದಾಡಿದ್ದಾರೆ. ವಿಶೇಷವಾಗಿ ಇಲ್ಲಿಯ ಅಸ್ಪಶ್ಯರು ಯಾವುದಕ್ಕೂ ಜಗ್ಗದವರು. ಗಂಡೆದೆಯವರು ಅನ್ನುತ್ತಾರಲ್ಲ ಹಾಗೆ. ಅಂತಹ ನಾಡಲ್ಲಿ ಹುಟ್ಟಿದ ಮಹೇಶ್ ಗೊಂದಲದಲ್ಲಿದ್ದ ಶೋಷಿತ ಸಮುದಾಯಗಳ ಚಳವಳಿಯನ್ನು ಬಾಬಾಸಾಹೇಬ್ ಅಂಬೇಡ್ಕರರ ಸಿದ್ಧಾಂತದಡಿಯಲ್ಲಿ ಸಂಘಟಿಸಿದರು. ಅಂಬೇಡ್ಕರರ ಸಂದೇಶಗಳನ್ನು ಜನರ ನಡುವೆ ಬಿತ್ತುತ್ತಾ, ಅವರ ಆದರ್ಶದ ಮಾದರಿಯಲ್ಲೇ ಶೋಷಿತ ಸಮುದಾಯಗಳ ಇತರ ಪೂರ್ವಿಕರ ಸಂದೇಶಗಳನ್ನು ಸಾರುತ್ತಾ... ಒಂದು ಹೊಸ ರಾಜಕೀಯ ಚಳವಳಿಗೆ ನಾಂದಿ ಹಾಡಿದರು.

ಎನ್.ಮಹೇಶ್‌ರವರು ರಾಜಕೀಯ ಪ್ರವೇಶಿಸಿದ 1998-99 ಸಮಯ ಅದು ಅಂಬೇಡ್ಕರ್ ಹೆಸರು ಹೇಳಿದರೆ ಯಾರು ಓಟು ಹಾಕುತ್ತಾರೆ ಎಂದು ಸಾಮಾನ್ಯರಿರಲಿ ಶೋಷಿತ ಸಮುದಾಯಗಳ ಜನರು ಕೂಡ ಅಂದುಕೊಳ್ಳುತ್ತಿದ್ದ ಕಾಲ. ಆದರೆ ಎನ್.ಮಹೇಶ್ ಜನಸಾಮಾನ್ಯರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ವಿಚಾರಗಳನ್ನು ಹೇಳುತ್ತಾ, ತಾವೇ ಬರೆದ ಕೃತಿಗಳು, ಹಾಡುಗಳ ಮೂಲಕ ಅವರ ಪ್ರಜ್ಞೆಯನ್ನು ಎಚ್ಚರಿಸುತ್ತಾ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಫುಲೆ, ಪೆರಿಯಾರ್,

ಶಾಹು, ನಾಲ್ವಡಿ... ಹೀಗೆ ಇತರ ಪೂರ್ವಿಕರ ಹೆಸರುಗಳನ್ನು ಕರ್ನಾಟಕದ ಉದ್ದಗಲಕ್ಕೂ ತಲುಪು ವಂತೆ ಮಾಡಿದರು. ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಕೊಂಡು ಅವರು ಸ್ಥಾಪಿಸಿದ ಸಂಘಟನೆ ಬಹುಜನ ವಿದ್ಯಾರ್ಥಿ ಸಂಘ(ಬಿವಿಎಸ್). ಅದರ ಮೂಲಕ ಬಹುಜನ ಚಳವಳಿಯನ್ನು, ಆ ಮೂಲಕ ಬಹುಜನ ಸಮಾಜ ಪಕ್ಷವನ್ನು ರಾಜ್ಯವ್ಯಾಪಿ ಜನಪ್ರಿಯಗೊಳಿಸಿದ ಅವರು ಜನಸಾಮಾನ್ಯ ರಲ್ಲಿ ವಿಶೇಷವಾಗಿ ಶೋಷಿತ ಸಮುದಾಯ ಗಳಲ್ಲಿ ಅಂಬೇಡ್ಕರ್ ಮಾದರಿಯ ಸ್ವಂತ ಪಕ್ಷದ ಸ್ವಾಭಿಮಾನದ ರಾಜಕಾರಣ ಮಾಡುವ ದಿಟ್ಟತನ ತುಂಬಿದರು.

ನಾಲ್ವಡಿಯವರ ಇತಿಹಾಸ ಮತ್ತೆ ಮುನ್ನೆಲೆಗೆ ತಂದದ್ದು:

ಎನ್.ಮಹೇಶ್‌ರವರು ಮಂಚೂಣಿಗೆ ಬರುವವರೆಗೆ ಕೆಆರ್‌ಎಸ್ ಕಟ್ಟಿದ್ದು ಯಾರು? ಎಂಬ ಪ್ರಶ್ನೆ ಕೇಳಿದರೆ ಥಟ್ಟನೆ ಬರುತ್ತಿದ್ದ ಹೆಸರು ಸರ್. ಎಂ. ವಿಶ್ವೇಶ್ವರಯ್ಯನವರದು. ಆದರೆ 2000ನೇ ಇಸವಿಯಲ್ಲಿ ವಿದ್ಯಾರ್ಥಿಗಳ ತರಬೇತಿ ಶಿಬಿರಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಬಗ್ಗೆ ಪಾಠ ಮಾಡಲು ಪ್ರಾರಂಭಿಸಿದ ಎನ್.ಮಹೇಶ್‌ರವರು ನಾಲ್ವಡಿಯವರ ಬಗ್ಗೆ ಅದ್ಭುತ ಕೃತಿ ಬರೆದು ಬಿಡುಗಡೆಗೊಳಿಸಿದರು. ಆ ಕೃತಿಯಲ್ಲಿ ಅವರು ಕೆಆರ್‌ಎಸ್ ನಿರ್ಮಾಣಕ್ಕೆ ನಾಲ್ವಡಿಯವರು ಪಟ್ಟ ಶ್ರಮವನ್ನು ಸಾಕ್ಷಿ ಸಮೇತ ಇಂಚಿಂಚೂ ವಿವರಿಸಿದರು. ಅದಲ್ಲದೆ ಅವರದೇ ಒಡನಾಡಿ ಮಿತ್ರ ಕವಿ ಹನಸೋಗೆ ಸೋಮಶೇಖರ್‌ರವರಿಂದ ‘‘ಮರೆಯೋದುಂಟೆ ಮೈಸೂರು ದೊರೆಯ... ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ...’’ ಎಂಬ ಅದ್ಭುತ ಹಾಡು ಬರೆಸಿ ಅದಕ್ಕೆ ಭವ್ಯವಾದ ರಾಗ ಕಟ್ಟಿ ನಾಡಿನ ಉದ್ದಗಲಕ್ಕೂ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಹೆಸರು ಜನಮಾನಸ ತಲುಪುವಂತೆ ನೋಡಿಕೊಂಡರು. ಆ ಮೂಲಕ ಮರೆಮಾಚಲ್ಪಟ್ಟ ಹಿಂದುಳಿದ ವರ್ಗದ ರಾಜನೊಬ್ಬನ ಸಾಧನೆಯನ್ನು ಜಗತ್ತಿಗೆ ಪುನರ್ ಪರಿಚಯಸಿದ್ದರು, ಕರ್ನಾಟಕದ ಇತಿಹಾಸದಲ್ಲಿ ಅವರಿಗೊಂದು ಪ್ರಮುಖ ಸ್ಥಾನ ಕಲ್ಪಿಸಿದ್ದರು.

ಎನ್.ಮಹೇಶ್‌ರವರು ಚಳವಳಿಗೆ ಹೀಗೆ ಧುಮುಕುವವರೆಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯಾಗಿದ್ದರು. ಆದರೆ ಕಾನ್ಶೀರಾಮ್‌ರವರ ಸಿದ್ಧಾಂತಕ್ಕೆ ಮನಸೋತು ಬಹುಜನ ಸಮಾಜ ಪಕ್ಷಕ್ಕೆ ಕಾಲಿಟ್ಟು 1999ರಲ್ಲಿ ಮಂಡ್ಯ ಲೋಕಸಭೆ ಮತ್ತು ಕಿರುಗಾವಲು ವಿಧಾನಸಭೆ ಹೀಗೆ ಒಮ್ಮೆಲೆ ಎರಡೂ ಕ್ಷೇತ್ರದಿಂದ ಚುನಾವಣಾ ರಾಜಕಾರಣ ಪ್ರವೇಶಿಸಿದ ಅವರು, ನಂತರ ತೊಡಗಿಸಿಕೊಂಡದ್ದು ಬಹುಜನ ವಿದ್ಯಾರ್ಥಿ ಸಂಘದ ಚಳವಳಿಯಲ್ಲಿ, ಆ ಮೂಲಕ ಬಹುಜನ ಸಮಾಜ ಪಕ್ಷದ ಸಂಘಟನೆಯಲ್ಲಿ. ಅಪ್ಪಟ ಅಂಬೇಡ್ಕರ್‌ವಾದಿಯಾದ ಮಹೇಶ್‌ರವರು ಶೋಷಿತರು ಸ್ವಂತ ಶಕ್ತಿಯ ಮೇಲೆ ರಾಜಕೀಯ ಅಧಿಕಾರ ಪಡೆಯಬೇಕು ಎಂಬ ಅಂಬೇಡ್ಕರರ ನಿಲುವಿಗೆ ಬದ್ಧರಾಗಿದ್ದಾರೆ. ಇತರರಿಂದಲೂ ಕೂಡ ಅವರು ಅಂತಹದ್ದೇ ಬದ್ಧತೆಯನ್ನು ಬಯಸುತ್ತಿದ್ದಾರೆ ರಾಜಕಾರಣವೇ ಏಕೆ ಬೇಕು? ಸಾಮಾಜಿಕ ಹೋರಾಟದಲ್ಲೆ ತೊಡಗಿಸಿಕೊಳ್ಳಬಹುದಲ್ಲ? ಎಂದು ಕೆಲವರು ಆಗಾಗ ಅವರನ್ನು ಪ್ರಶ್ನಿಸಿದ್ದುಂಟು. ಇದಕ್ಕೆ ಒಂದು ಸಂದರ್ಭದಲ್ಲಿ ಜರ್ಮನಿಯ ಕವಿ ಮತ್ತು ನಾಟಕಕಾರ ಬರ್ಟೋಲ್ ಬ್ರೆಕ್ಟ್‌ನ ಈ ಕೆಳಗಿನ ನುಡಿಗಳನ್ನು ಮಹೇಶ್‌ರವರು ಉಲ್ಲೇಖಿಸಿದ್ದರು. ಬ್ರೆಕ್ಟ್‌ನ ಆ ನುಡಿಗಳೆಂದರೆ ‘‘ಅತಿ ಕೆಟ್ಟ ಅವಿದ್ಯಾವಂತ ಎಂದರೆ, ರಾಜಕೀಯ ಅವಿದ್ಯಾವಂತ; ಆತನಿಗೆ ಕೇಳಿಸುವುದಿಲ್ಲ, ಆತ ಮಾತನಾಡುವುದಿಲ್ಲ, ಎಲ್ಲವೂ ರಾಜಕೀಯ ನಿರ್ಧರಿತವಾಗಿದೆ ಎಂಬುದು ಆ ಮೂರ್ಖನಿಗೆ ತಿಳಿದಿಲ್ಲ. ಆತ ರಾಜಕೀಯ ದ್ವೇಷಿಸುತ್ತೇನೆ ಎನ್ನುತ್ತಾನೆ. ಆದರೆ ತನ್ನ ರಾಜಕೀಯ ಅಜ್ಞಾನದಿಂದಲೇ ಒಬ್ಬ ಸೂಳೆ, ನಿರ್ಗತಿಕ ಮಗು, ತಿಳಿಗೇಡಿ ಸ್ವಾರ್ಥ ನಾಯಕರು ಸೃಷ್ಟಿಯಾಗುತ್ತಾರೆ ಎಂಬುದು ಈತನಿಗೆ ತಿಳಿದಿಲ್ಲ....’’

ಅಂದಹಾಗೆ ಇದು ಇವರ ಮೋಡಿಮಾಡುವ ವಾಕ್ಚಾತುರ್ಯದ ಒಂದು ಝಲಕ್ ಅಷ್ಟೇ! ಈ ನಿಟ್ಟಿನಲ್ಲಿ ಹೇಳುವುದಾದರೆ ಇವರ ಭಾಷಣ ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹಾಗೆಯೇ ಇವರು ತನ್ನಂತೆ ನೂರಾರು ಅಂಬೇಡ್ಕರ್‌ವಾದಿ ಲೇಖಕರು, ಸಾಹಿತಿಗಳು, ಗಾಯಕರು, ಕಲಾವಿದರು, ಕವಿಗಳು, ವಾಗ್ಮಿಗಳನ್ನು ಸೃಷ್ಟಿಸಿದ್ದು ಮತ್ತು ಈ ಹಿನ್ನೆಲೆಯಲ್ಲಿ ಅಂತಹ ಪ್ರತಿಭಾವಂತರ ದೊಡ್ಡ ದಂಡನ್ನೇ ಕಟ್ಟಿಕೊಂಡು ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಒಂದೆರಡನ್ನು ದಾಖಲಿಸುವುದಾದರೆ ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಹೋರಾಟ, ಹಾಸ್ಟೆಲ್ ವಿದ್ಯಾರ್ಥಿಗಳ ಭತ್ತೆ ಹೆಚ್ಚಿಸುವಿಕೆಗಾಗಿನ ಹೋರಾಟ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಹೋರಾಟ, ಮಹಾದಾಯಿ ನೀರಿಗಾಗಿ 87 ಕಿ.ಮೀ ಬೃಹತ್ ಪಾದಯಾತ್ರೆ, ಕೊಳ್ಳೇಗಾಲದ ಚಿಕ್ಕಲ್ಲೂರಿನಲ್ಲಿ ಪಂಕ್ತಿಸೇವೆಯಲ್ಲಿ ಅಲ್ಲಿನ ಬಹುಕಾಲದ ಸಂಪ್ರದಾಯ ಪ್ರಾಣಿಬಲಿಗೆ ಅವಕಾಶ ಕೊಡಬೇಕೆಂದು ನಡೆಸಿದ ಹೋರಾಟ... ಇತ್ಯಾದಿ...

ಖುಷಿಯ ವಿಚಾರವೆಂದರೆ ಇಂತಹ ದಿಟ್ಟ ಅಂಬೇಡ್ಕರ್‌ವಾದಿ ಈ ಬಾರಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಒಂದು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಕೊಳ್ಳೇಗಾಲದಿಂದ ಸತತವಾಗಿ ಅಂದರೆ 2004, 2008, 2013 ಹೀಗೆ ಮೂರು ಬಾರಿ ವಿಧಾನಸಭೆಗೆ, ಚಾಮರಾಜನಗರದಿಂದ ಒಂದು ಬಾರಿ ಅಂದರೆ 2009ರಲ್ಲಿ ಲೋಕಸಭೆಗೆ ಬಿಎಸ್ಪಿಯಿಂದ ಸ್ಪರ್ಧಿಸಿ ಸೋತರೂ ಧೃತಿಗೆಡದ ಮಹೇಶ್‌ರವರು ಬೇರೆ ಯಾವುದೇ ಪಕ್ಷ ಸೇರದೆ ಛಲ ಬಿಡದ ತ್ರಿವಿಕ್ರಮನಂತೆ ಬಿಎಸ್ಪಿಯಿಂದಲೆ ಈ ಬಾರಿಯೂ ಸ್ಪರ್ಧಿಸಿ 19,454 ಮತಗಳ ಭರ್ಜರಿ ಅಂತರದೊಂದಿಗೆ ಗೆದ್ದಿದ್ದಾರೆ. ಒಂದಂತು ನಿಜ, ಬರೀ ಹಣವಂತರೇ ಆಯ್ಕೆಯಾಗುತ್ತಿರುವ ಈ ಹೊತ್ತಿನಲ್ಲಿ ತಮ್ಮ ಈ ಗೆಲುವಿನ ಮೂಲಕ ಜನಪರ ಹೋರಾಟಗಾರರೂ ಕೂಡ ಶಾಸನಸಭೆಗಳಿಗೆ ಆಯ್ಕೆಯಾಗಬಹುದು ಎಂಬ ನೈಜ ರಾಜಕಾರಣದ ವ್ಯಾಖ್ಯೆಗೆ ಎನ್. ಮಹೇಶ್ ಸಾಕ್ಷಿಯಾಗುತ್ತಾರೆ. ಈ ನಿಟ್ಟಿನಲ್ಲಿ ಘಟಾನುಘಟಿಗಳ ನಡುವೆ ಮಹೇಶ್‌ರವರು ಸದನಕ್ಕೆ ಕಳೆಕೊಡಲಿದ್ದಾರೆ.

Writer - ರಘೋತ್ತಮ ಹೊ. ಬ.

contributor

Editor - ರಘೋತ್ತಮ ಹೊ. ಬ.

contributor

Similar News