ಕರ್ನಾಟಕದ ಪ್ರಭಾವ: ರಾಜ್ಯಪಾಲರ ಮೇಲೆ ಒತ್ತಡ ಹೇರಲು ಈ ರಾಜ್ಯದಲ್ಲಿ ಪ್ರವಾಸ ಆರಂಭಿಸಿದೆ ಕಾಂಗ್ರೆಸ್

Update: 2018-05-22 14:12 GMT

ಪಣಜಿ,ಮೇ 22: ಬಿಜೆಪಿ ನೇತೃತ್ವದ ಸರಕಾರದ ವೈಫಲ್ಯಗಳನ್ನು ಬಿಂಬಿಸಲು ಮತ್ತು ರಾಜ್ಯದಲ್ಲಿ ಸರಕಾರ ರಚನೆಗೆ ಪ್ರತಿಪಕ್ಷವನ್ನು ಆಹ್ವಾನಿಸುವಂತೆ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರ ಮೇಲೆ ಒತ್ತಡವನ್ನು ಹೇರಲು ಕಾಂಗ್ರೆಸ್ ಮಂಗಳವಾರ ಗೋವಾದಾದ್ಯಂತ ಪ್ರವಾಸಕ್ಕೆ ಚಾಲನೆ ನೀಡಿತು.

ಗೋವಾದಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸಬೇಕೆಂದು ಬಯಸಿರುವ ಕಾಂಗ್ರೆಸ್ ರಾಜ್ಯದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಈ ಹಿಂದೆ ನಿರ್ಧರಿಸಿತ್ತು. ಅದು ಕಳೆದ ವರ್ಷ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ಅತಿ ದೊಡ್ಡಪಕ್ಷವಾಗಿ ಮೂಡಿಬಂದಿತ್ತು.

ರಾಜ್ಯಪಾಲೆಯವರು ಹಾಲಿ ಗೋವಾ ಸರಕಾರವನ್ನು ವಜಾ ಮಾಡುವವರೆಗೆ ಪ್ರತಿಭಟನೆಯು ಮುಂದುವರಿಯಲಿದೆ ಎಂದು ತಿಳಿಸಿದ ಎಐಸಿಸಿ ಕಾರ್ಯದರ್ಶಿ ಡಾ.ಎ.ಚೆಲ್ಲಕುಮಾರ ಅವರು,‘ಜನ ಗಣ ಮನ,ನಾವು ಗೋವಾ ಜನತೆಗೆ ವಂದಿಸುತ್ತೇವೆ’ ಹೆಸರಿನ ಪ್ರವಾಸವು ಪಣಜಿಯಿಂದ ಆರಂಭಗೊಂಡಿದ್ದು,ರಾಜ್ಯದ ಎಲ್ಲ 40 ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಲಿದೆ ಎಂದು ತಿಳಿಸಿದರು.

ರಾಜ್ಯ ಸಚಿವಾಲಯದ ಎದುರು ಬೃಹತ್ ಮೋರ್ಚಾದೊಂದಿಗೆ ಈ ಪ್ರವಾಸವು ಅಂತ್ಯಗೊಳ್ಳಲಿದೆ ಎಂದು ಅವರು ಹೇಳಿದರಾದರೂ,ಅದು ಎಷ್ಟು ಸಮಯ ಮುಂದುವರಿಯಲಿದೆ ಎನ್ನುವುದನ್ನು ನಿರ್ದಿಷ್ಟವಾಗಿ ತಿಳಿಸಲಿಲ್ಲ.

ಕಾಂಗ್ರೆಸ್ ಪಕ್ಷವು ಸದನದಲ್ಲಿ ಇತರ ಎಲ್ಲ ಪಕ್ಷಗಳಿಗಿಂತ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿರುವುದರಿಂದ ರಾಜ್ಯಪಾಲೆ ಸಿನ್ಹಾ ಅವರು ಸರಕಾರ ರಚನೆಗೆ ಅದನ್ನು ಆಹ್ವಾನಿಸಬೇಕು ಎಂದರು.

ಉದ್ಯೋಗ ಸೃಷ್ಟಿಯ ಬಿಜೆಪಿ ಭರವಸೆ ಸುಳ್ಳಾಗಿದೆ,ಬದಲಿಗೆ ಗಣಿಗಾರಿಕೆಯನ್ನು ಮುಚ್ಚಿರುವುದರಿಂದ ರಾಜ್ಯದಲ್ಲಿ ನಿರುದ್ಯೋಗವು ಹೆಚ್ಚಾಗಿದೆ ಎಂದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಗಣಿಗಾರಿಕೆ ಉದ್ಯಮದಲ್ಲಿನ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News