ನಿಪಾಹ್ ವೈರಸ್ ಗೆ ಬಲಿಯಾದ ನರ್ಸ್ ಲಿನಿ ಪತಿಗೆ ಸರಕಾರಿ ಉದ್ಯೋಗ
ತಿರುವನಂತಪುರಂ, ಮೇ 23: ನಿಪಾಹ್ ವೈರಸ್‍ನಿಂದಾಗಿ ಮೃತಪಟ್ಟಿರುವ ನರ್ಸ್ ಲಿನಿಯವರ ಪತಿ ಸಜೀಶ್‍ರಿಗೆ ಸರಕಾರಿ ಉದ್ಯೋಗವ್ನನು ನೀಡುವುದಾಗಿ ಕೇರಳ ಸರಕಾರ ತೀರ್ಮಾನಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದ್ದು, ಲಿನಿಯವರ ಇಬ್ಬರು ಮಕ್ಕಳಿಗೆ ತಲಾ ಐದು ಲಕ್ಷ ರೂ. ಸಹಾಯಧನ ನೀಡಲಿದೆ.
ಮಕ್ಕಳಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಧನಸಹಾಯದ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಡಲಾಗುವುದು. ಇದರ ಬಡ್ಡಿ ಹಣವನ್ನು ಮಕ್ಕಳಿಗೆ ಪ್ರತಿ ತಿಂಗಳು ನೀಡಲಾವುದು. ನಿಪಾಹ್ ವೈರಸ್ ನಿಂದ ಮೃತಪಟ್ಟಿರುವ ಇತರರ ಕುಟುಂಬಗಳಿಗೂ ಐದು ಲಕ್ಷ ರೂ. ಪರಿಹಾರ ನೀಡಲು ಕೇರಳ ಸರಕಾರದ ಸಚಿವ ಸಂಪುಟ ನಿರ್ಣಯಿಸಿದೆ.
ಈಗ ರೋಗ ನಿಯಂತ್ರಣಗೊಂಡಿದೆ. ಸೋಂಕು ತಗಲಿದವರ ಸಂಬಂಧಿಕರಲ್ಲಿ ಮಾತ್ರ ಈಗ ಲಕ್ಷಣಗಳು ಗೋಚರಿಸಿವೆ. ಪೆರಾಂಬ್ರದ ಸುತ್ತಮುತ್ತ ನಿಪಾಹ್ ವೈರಸ್ ಹರಡಿತ್ತು. ಬೇರೆ ಕಡೆಗೂ ವೈರಸ್ ಹಬ್ಬಿದೆ ಎನ್ನುವುದು ಸುಳ್ಳು ಎಂದು ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದರು.
ಇಂತಹ ಸಂದರ್ಭದಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಹೇಗೆ ಕಾರ್ಯನಿರ್ವಹಿಸಬೇಕೆನ್ನುವ ಕುರಿತು ಏಮ್ಸ್‍ನಿಂದ ಬಂದಿರುವ ತಜ್ಞರ ತಂಡ ತರಬೇತಿ ನೀಡುತ್ತಿದೆ ಎಂದರು.
ಇದೇ ಸಂದರ್ಭ ಲಿನಿಯವರ ಪತಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆನ್ನುವುದು ಲಿನಿಯ ಬಯಕೆ ಆಗಿತ್ತು. ಇದಕ್ಕೆ ಸರಕಾರದ ಸಹಾಯ ಉಪಯುಕ್ತವಾಗಲಿದೆ ಎಂದು ಪತಿ ಸಜೀಶ್ ಹೇಳಿದರು.
ಕಲ್ಲಿಕೋಟೆ ಪೆರಾಂಬ್ರದಲ್ಲಿ ನಿಪಾಹ್ ವೈರಸ್ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯನ್ನು ಉಪಚರಿಸಿದ್ದ ನರ್ಸ್ ಲಿನಿ ಅದೇ ವೈರಸ್‍ಗೆ ಬಲಿಯಾಗಿದ್ದರು.