ಪ್ರಧಾನಿ ಮೋದಿಗೆ ತೇಜಸ್ವಿ ಯಾದವ್ ಹೊಸ ಸವಾಲು

Update: 2018-05-24 09:45 GMT

ಹೊಸದಿಲ್ಲಿ, ಮೇ 24: ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಫಿಟ್ನೆಸ್ ಚಾಲೆಂಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿದ್ದೇ ತಡ ಅವರಿಗೆ ವಿಪಕ್ಷಗಳಿಂದ ಹೆಚ್ಚು ಸವಾಲುಗಳು ಬರಲಾರಂಭಿಸಿವೆ.

ರಾಜಕೀಯ ಅಖಾಡಕ್ಕೆ ಧುಮುಕುವ ಮುನ್ನ ಕ್ರಿಕೆಟಿಗನಾಗಿದ್ದ ತೇಜಸ್ವಿ ಯಾದವ್ ಪ್ರಧಾನಿಗೆ ನೀಡಲಾದ ಚಾಲೆಂಜ್ ಅನ್ನು ಸ್ವಲ್ಪ ತಿರುಚಿ ಸರಕಾರದ  ವೈಫಲ್ಯಗಳನ್ನು ಬೊಟ್ಟು ಮಾಡಿದ್ದಾರೆ.

“ವಿರಾಟ್ ಕೊಹ್ಲಿಯವರ ಫಿಟ್ನೆಸ್ ಚಾಲೆಂಜ್ ಅನ್ನು ನೀವು ಒಪ್ಪಿರುವುದಕ್ಕೆ ನಮ್ಮದೇನೂ ವಿರೋಧವಿಲ್ಲವಾದರೂ, ಯುವಕರಿಗೆ ಉದ್ಯೋಗವೊದಗಿಸುವ, ರೈತರಿಗೆ ಪರಿಹಾರ ನೀಡುವ ಸವಾಲು ಸ್ವೀಕರಿಸಿ, ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ಹಿಂಸೆ ನಡೆಯುವುದಿಲ್ಲವೆಂಬ ಭರವಸೆ ನಿಮ್ಮಿಂದ ಬಯಸುತ್ತೇವೆ. ನನ್ನ ಚಾಲೆಂಜ್ ಅನ್ನು ಒಪ್ಪುತ್ತೀರಾ ನರೇಂದ್ರ ಮೋದಿ ಸರ್?,'' ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.

ಇದಾದ ಸ್ವಲ್ಪವೇ ಹೊತ್ತಿನಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಸರಣಿ ಟ್ವೀಟ್ ಗಳ ಮುಖಾಂತರ ಮೋದಿ ಮುಂದೆ ಹಲವು ಸವಾಲುಗಳನ್ನೆಸೆದಿದ್ದಾರೆ. “ಕಳೆದ ನಾಲ್ಕು ವರ್ಷಗಳಲ್ಲಿ ಅಬಕಾರಿ ಸುಂಕವನ್ನು 11 ಬಾರಿ ಏರಿಸಿ ಜನರಿಂದ ರೂ 10 ಲಕ್ಷ ಕೋಟಿ ಕೊಳ್ಳೆ  ಹೊಡೆದಿರುವಾಗ ಈಗ ಸಾಮಾನ್ಯರ ಆರ್ಥಿಕ ಫಿಟ್ನೆಸ್ ಅನ್ನು ಪೆಟ್ರೋಲ್ ಬೆಲೆ ಇಳಿಸುವ ಮೂಲಕ  ಮರುಸ್ಥಾಪಿಸಬೇಕು, ಯುವಕರಿಗೆ 2 ಕೋಟಿ ಉದ್ಯೊಗ ಸೃಷ್ಟಿಸಬೇಕು, ನೀವು ಭರವಸೆ ನೀಡಿದಂತೆ ಕನಿಷ್ಠ ಬೆಂಬಲ ಬೆಲೆ ಹಾಗೂ ಶೇ 50ರಷ್ಟು ಲಾಭವನ್ನು  ರೈತರಿಗೆ ನೀಡಬೇಕು, ನೀವು ಆಶ್ವಾಸನೆ ನೀಡಿದಂತೆ ರೂ 80 ಲಕ್ಷ ಕೋಟಿ ಕಪ್ಪು ಹಣವನ್ನು ವಿದೇಶಗಳಿಂದ ವಾಪಸ್ ತರಬೇಕು, ಪಾಕ್ ಪ್ರಾಯೋಜಿತ ಉಗ್ರವಾದ ಹಾಗೂ ಡೋಕ್ಲಂನಲ್ಲಿ ಚೀನಾದ ಆಕ್ರಮಣವನ್ನು ನಿಲ್ಲಿಸಿ ರಾಷ್ಟ್ರೀಯ ಸುರಕ್ಷತಾ ಫಿಟ್ನೆಸ್ ಗಳಿಸಬೇಕು” ಎಂದು ಅಗ್ರಹಿಸಿದ್ದರೆ, “ಮಾಧ್ಯಮ ಸ್ಟಂಟ್ ಬಿಟ್ಟು ಆಡಳಿತಕ್ಕೆ ಸಂಬಂಧಿಸಿದ ಸವಾಲನ್ನು ಒಪ್ಪಿಕೊಳ್ಳಿ” ಎಂದು ಪ್ರಧಾನಿಗೆ ಸುರ್ಜೇವಾಲ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News